SUDDILIVE || SHIVAMOGGA
ಶಿಮುಲ್‌ಗೆ ನೂತನ ಎಂಡಿ- Shimul gets new MD
ಶಿವಮೊಗ್ಗ, ಜೂನ್ 23: ಶಿವಮೊಗ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಶಿಮುಲ್ (ಶಿವಮೊಗ್ಗ ಹಾಲು ಒಕ್ಕೂಟ)ಗೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಡಾ. ಮಂಜೇಶ್ ನೇಮಕಗೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಕಾರ್ಯಕ್ಷಮತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಡಾ. ಮಂಜೇಶ್ ಅವರು ಹಾಲು ಸಹಕಾರ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿದ್ದು, ಬೆಂಗಳೂರು ಡೈರಿಯಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ಮಂಡ್ಯ ಹಾಲು ಒಕ್ಕೂಟದಲ್ಲಿ ನಾಲ್ಕೂವರೆ ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಈ ಹಿಂದೆ ಶಿಮುಲ್ ಎಂಡಿಯಾಗಿದ್ದ ಶೇಖರ್ ಅವರು ಧಾರವಾಡ ಹಾಲು ಒಕ್ಕೂಟಕ್ಕೆ ವರ್ಗವಾಗಿ ನಿಯುಕ್ತಿಗೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಮಾಧ್ಯಮಕ್ಕೆ ಮಾತನಾಡಿದ ಡಾ. ಮಂಜೇಶ್, “ನಾನು ಹೊಸದಾಗಿ ಶಿಮುಲ್‌ಗೆ ಬಂದಿದ್ದು, ಇಲ್ಲಿನ ಆಡಳಿತ ವ್ಯವಸ್ಥೆ ಹಾಗೂ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು” ಎಂದು ತಿಳಿಸಿದರು.
ಪ್ರಸ್ತುತ ಶಿಮುಲ್‌ಗೆ ಪ್ರತಿದಿನ ಸುಮಾರು 9.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಸಂಸ್ಕರಿಸಿ ವಿತರಿಸುವುದು ಪ್ರಮುಖ ಗುರಿಯಾಗಿದೆ. ಹಾಲು ಉತ್ಪಾದಕ ರೈತರ ಹಿತಾಸಕ್ತಿ ಹಾಗೂ ಅವರ ಅಭಿವೃದ್ಧಿಯೇ ತಮ್ಮ ಕಾರ್ಯದ ಕೇಂದ್ರಬಿಂದುವಾಗಿದ್ದು, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನೂತನ ಎಂಡಿ ನೇಮಕದಿಂದ ಶಿಮುಲ್‌ನಲ್ಲಿ ಹೊಸ ಯೋಜನೆಗಳು ಹಾಗೂ ಆಡಳಿತಾತ್ಮಕ ಬದಲಾವಣೆಗಳು ಜಾರಿಗೆ ಬರುವ ನಿರೀಕ್ಷೆ ಮೂಡಿದ್ದು, ಹಾಲು ಉತ್ಪಾದಕ ರೈತರು ಮತ್ತು ಸಹಕಾರ ವಲಯದಲ್ಲಿ ಆಶಾಭಾವನೆ ವ್ಯಕ್ತವಾಗಿದೆ.

