SUDDILIVE || SHIVAMOGGA
ಅಕ್ಕಿ ಸಮೇತ ಲಾರಿ ಚಾಲಕ ನಾಪತ್ತೆ-Driver of rice-laden lorry goes missing
ಭದ್ರಾವತಿ: ಅಕ್ಕಿ ಸಾಗಣೆ ಮಾಡುವ ನೆಪದಲ್ಲಿ ₹4.20 ಲಕ್ಷ ಮೌಲ್ಯದ 300 ಚೀಲ ಅಕ್ಕಿಯನ್ನು ಪಡೆದು, ನಿಗದಿತ ಸ್ಥಳಕ್ಕೆ ತಲುಪಿಸದೇ ವಂಚಿಸಿದ ಆರೋಪದಡಿ ಲಾರಿ ಚಾಲಕನ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಣಬಾಗಟ್ಟ ಗ್ರಾಮದ ನಿವಾಸಿ ಹಾಗೂ ಅಕ್ಕಿ ವ್ಯಾಪಾರಿ ಎನ್. ಮಹಮ್ಮದ್ ಜಾಫರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಆರೋಪಿಯಾಗಿರುವ ಪ್ರೇಮಕುಮಾರ್ @ ಪ್ರಜ್ವಲ್ (40), ಬೆಂಗಳೂರಿನ ಮಾಗಡಿ ರಸ್ತೆಯ ಕೆಂಪೇಗೌಡ ನಗರದ ನಿವಾಸಿಯಾಗಿದ್ದು, ಲಾರಿ ಚಾಲಕರಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ಜೂನ್ 3ರಂದು ಕೆಎ-52-ಎಸ್-3560 ಸಂಖ್ಯೆಯ ಐಶರ್ ವಾಹನದಲ್ಲಿ 200 ಚೀಲ (₹2.80 ಲಕ್ಷ) ಅಕ್ಕಿಯನ್ನು ಮಂಡ್ಯದ ಎಂ.ಎನ್. ಅಗರ್‌ವಾಲ್ ರೈಸ್ ಮಿಲ್‌ಗೆ ಹಾಗೂ 100 ಚೀಲ (₹1.40 ಲಕ್ಷ) ಅಕ್ಕಿಯನ್ನು ಬಾಣಾವರ ಸಮೀಪದ ಲಕ್ಷ್ಮೀ ವೆಂಕಟೇಶ್ವರ ಮಡಗ ರೈಸ್ ಮಿಲ್‌ಗೆ ಸಾಗಿಸಲು ನೀಡಲಾಗಿತ್ತು. ಆದರೆ ಆರೋಪಿಯು ಅಕ್ಕಿಯನ್ನು ನಿಗದಿತ ಸ್ಥಳಕ್ಕೆ ತಲುಪಿಸದೆ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಒಟ್ಟು ₹4.20 ಲಕ್ಷ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜೂನ್ 4ರಂದು ಚಾಲಕನನ್ನು ಸಂಪರ್ಕಿಸಿದಾಗ ವಾಹನ ಕೆಟ್ಟು ನಿಂತಿದೆ ಎಂದು ತಿಳಿಸಿದ್ದಾನೆ. ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನಂತರ ಅಕ್ಕಿ ತಲುಪಿಲ್ಲ ಎಂಬ ಮಾಹಿತಿ ರೈಸ್ ಮಿಲ್‌ನಿಂದ ಬಂದ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಕಾರಣ ಜೂನ್ 25ರಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
Driver of rice-laden lorry goes missing
