ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ; ಸರ್ಜಿ ಫೌಂಡೇಶನ್‌ನಿಂದ ‘ಕಾಯಕಸೇತು ಪರೀಕ್ಷಾಪಥ’ ಆರಂಭ- Free training for Police Constable recruitment exam; Sarji Foundation launches 'Kayakasethu ParikshaPath'

 SUDDILIVE || SHIVAMOGGA

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ; ಸರ್ಜಿ ಫೌಂಡೇಶನ್‌ನಿಂದ ‘ಕಾಯಕಸೇತು ಪರೀಕ್ಷಾಪಥ’ ಆರಂಭ- Free training for Police Constable recruitment exam; Sarji Foundation launches 'Kayakasethu ParikshaPath'    

Police, constable

ಶಿವಮೊಗ್ಗ, ಜೂನ್ 25: ಮುಂಬರುವ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ಸರ್ಜಿ ಫೌಂಡೇಶನ್ ಹಾಗೂ ಜೆಸಿಐ ಶಿವಮೊಗ್ಗ ಮಲ್ನಾಡ್ ಸಂಯುಕ್ತಾಶ್ರಯದಲ್ಲಿ ಉಚಿತ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜುಲೈ 1ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಒಂದು ದಿನದ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು. ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪ ಡುಂಡಿಗೆರೆ ಹಾಗೂ ನಾಗರಾಜ್ ರೆಡ್ಡಿ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ಮಾದರಿ, ದೈಹಿಕ ಪರೀಕ್ಷೆಯ ವಿಧಾನ, ಪಠ್ಯಕ್ರಮ ವಿಶ್ಲೇಷಣೆ, ಪರೀಕ್ಷಾ ತಂತ್ರಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ “ಕಾಯಕಸೇತು ಪರೀಕ್ಷಾಪಥ” ಶೀರ್ಷಿಕೆಯಡಿ 30 ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಲೋಕಾರ್ಪಣೆ ಮಾಡಲಾಗುವುದು. ಜೂನ್ 29ರಿಂದ ಆರಂಭವಾಗಲಿರುವ ಈ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆಗಳ ಕಾಲ ನುರಿತ ಉಪನ್ಯಾಸಕರಿಂದ ಪಾಠ ಮಾಡಲಾಗುತ್ತದೆ.

ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕಾಗಿ ಪ್ರತಿದಿನ ಹಾಗೂ ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುವುದು. ಜೊತೆಗೆ, ತರಬೇತಿಗೆ ಸೇರುವ ಅಭ್ಯರ್ಥಿಗಳಿಗೆ ಡಿಜಿಟಲ್ ರೂಪದಲ್ಲಿ ಸಮಗ್ರ ಅಧ್ಯಯನ ಸಾಮಗ್ರಿಯನ್ನು ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ದುಬಾರಿ ತರಬೇತಿ ಕೇಂದ್ರಗಳಿಗೆ ತೆರಳುವುದು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ತರಬೇತಿಯನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಆದರೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ 30 ದಿನಗಳ ಆನ್‌ಲೈನ್ ತರಬೇತಿಗೆ ಕೇವಲ 1,000 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಕಾಯಕಸೇತು ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿತ ಅರ್ಹ ಪದವೀಧರ ಅಭ್ಯರ್ಥಿಗಳನ್ನು ಮಾತ್ರ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಕಾಯಕಸೇತು ಜಾಬ್ ಪೋರ್ಟಲ್ ಸಾಧನೆ ಕುರಿತು ಮಾಹಿತಿ ನೀಡಿದ ಅವರು, ಜೂನ್ 8ರಿಂದ 13ರವರೆಗೆ ನಡೆದ ಉದ್ಯೋಗ ಸಂದರ್ಶನ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 404 ಮಂದಿ ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಕಾಯಕಸೇತು ಪೋರ್ಟಲ್ ಮೂಲಕ ಒಟ್ಟು 544 ಯುವಜನತೆಗೆ ಉದ್ಯೋಗ ದೊರಕಿದೆ ಎಂದು ತಿಳಿಸಿದರು. ಇದೇ ವೇಳೆ ಪರೀಕ್ಷ ಪಥದ ಪೋಸ್ಟರ್ ಬಿಡುಗಡೆ ಮಾಡಲಾಯಿತು.


ಸುದ್ದಿಗೋಷ್ಠಿಯಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ. ಗಿರಿಮಾಜಿ, ಕಾರ್ಯಕ್ರಮ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ ಹಾಗೂ ಪೂರ್ವ ವಲಯ ಅಧಿಕಾರಿ ಕಿರಣ್ ಕುಮಾರ್ ಉಪಸ್ಥಿತರಿದ್ದರು.

Free training for Police Constable recruitment exam; Sarji Foundation launches 'Kayakasethu ParikshaPath'

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close