SUDDILIVE || SHIVAMOGGA
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರ ಬಂಧನ-Five arrested in three separate cases
![]() |
| ಆನಂದಪುರ ಪೊಲೀಸರ ಕಾರ್ಯಾಚರಣೆ |
![]() |
| ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ |
![]() |
| ಸಾಗರದ ಅರಳಿಕೊಪ್ಪದಲ್ಲಿ ದಾಳಿ |
ಶಿವಮೊಗ್ಗ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಪೊಲೀಸರು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ, ಗಾಂಜಾ, ಎಂಡಿಎಂಎ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರೂನಗರ–ಅರಳಿಕೊಪ್ಪ ರಸ್ತೆಯ ಅರಳಿಕೊಪ್ಪ ಲೇಔಟ್ ಕ್ರಾಸ್ ಸಮೀಪ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಅಲ್ತಾಫ್ ಅಶ್ಫಾಕ್ (38) ಹಾಗೂ ಅಕ್ಬರ್ ಬೇಗ್ (40) ಎಂಬ ಆರೋಪಿಗಳನ್ನು ಬಂಧಿಸಿ, ಸುಮಾರು 330 ಗ್ರಾಂ ಗಾಂಜಾ, 16,500 ರೂ. ಮೌಲ್ಯದ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 4 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡರು. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡ ಚಾನಲ್ ಏರಿ ರಸ್ತೆಯ ಖಾಲಿ ಲೇಔಟ್ ಸಮೀಪ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಡಿ ಅಜರುದ್ದೀನ್ ಅಲಿಯಾಸ್ ಅಜರ್ (26) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಸುಮಾರು 15 ಗ್ರಾಂ ಎಂಡಿಎಂಎ, 1.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ಮೊಬೈಲ್ ಫೋನ್ ಹಾಗೂ 1,600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಗರದಿಂದ ಆನಂದಪುರಕ್ಕೆ ಬರುತ್ತಿದ್ದ ಬೈಕ್‌ನ್ನು ತಡೆದು ಪರಿಶೀಲಿಸಿದ ವೇಳೆ ಗಾಂಜಾ ಸಾಗಾಟ ಮಾಡುತ್ತಿದ್ದ ಮುಜ್ಜು ಹಾಗೂ ಹಫೀಜುಲ್ಲಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 95 ಗ್ರಾಂ ಗಾಂಜಾ, 4,752 ರೂ. ಮೌಲ್ಯದ ಮಾದಕ ವಸ್ತು ಹಾಗೂ 50 ಸಾವಿರ ರೂ. ಮೌಲ್ಯದ ಮೋಟಾರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಮೂರು ಪ್ರಕರಣಗಳಲ್ಲೂ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.
Five arrested in three separate cases


