SUDDILIVE || HOSANAGARA || THIRTHAHALLI
ಎರಡು ತಿಂಗಳ ಬಳಿಕ ವಾಹನ ಸಂಚಾರಕ್ಕೆ ಸಜ್ಜಾದ ಹುಲಿಕಲ್ ಘಾಟ್-Hulikal Ghat ready for vehicular traffic after two months ತುರ್ತು ಕಾಮಗಾರಿ ಪೂರ್ಣ; ಇನ್ನೆರಡು-ಮೂರು ದಿನಗಳಲ್ಲಿ ಬಸ್ ಹಾಗೂ ಸಣ್ಣ ವಾಹನಗಳ ಓಡಾಟಕ್ಕೆ ಅವಕಾಶ
ಕಳೆದ ಸುಮಾರು ಎರಡು ತಿಂಗಳಿಂದ ಭೂಕುಸಿತ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಗಳ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮಲೆನಾಡು–ಕರಾವಳಿ ನಡುವಿನ ಪ್ರಮುಖ ಮತ್ತು ಸುರಕ್ಷಿತ ಸಂಪರ್ಕದ ಕೊಂಡಿಯಾಗಿರುವ ಹುಲಿಕಲ್ ಘಾಟ್ ರಸ್ತೆ ಮತ್ತೆ ವಾಹನ ಸಂಚಾರಕ್ಕೆ ಸಜ್ಜಾಗಿದೆ.
ಏಪ್ರಿಲ್ ತಿಂಗಳಲ್ಲಿ ಹುಲಿಕಲ್ ಘಾಟ್‌ನ ತಿರುವು ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ಸಂಭವಿಸಿದ್ದ ಭೂಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಬಳಿಕ ಸುರಕ್ಷತಾ ಕಾರಣಗಳಿಂದ ರಸ್ತೆ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಈ ಅವಧಿಯಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತ್ವರಿತ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. ವಾಹನ ಸಂಚಾರವನ್ನ ಏ.11 ರಿಂದ ಬಂದ್ ಮಾಡಿ ಕಾಮಗಾರಿ ಆರಂಭವಾಗಿತ್ತು.
ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ, ಮಣ್ಣು ತೆರವು, ರಸ್ತೆ ಬಲವರ್ಧನೆ ಹಾಗೂ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದೀಗ ತುರ್ತು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಇನ್ನೆರಡು ಅಥವಾ ಮೂರು ದಿನಗಳಲ್ಲಿ ಮೊದಲ ಹಂತವಾಗಿ ಸಣ್ಣ ವಾಹನಗಳು ಹಾಗೂ ಬಸ್ ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಭಾರೀ ವಾಹನಗಳ ಸಂಚಾರ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ.
ಹುಲಿಕಲ್ ಘಾಟ್ ರಸ್ತೆ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಭಾಗಗಳನ್ನು ಕುಂದಾಪುರ ಹಾಗೂ ಕರಾವಳಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ರಸ್ತೆ ಬಂದ್‌ನಿಂದ ಪ್ರಯಾಣಿಕರು ಹಾಗೂ ವ್ಯಾಪಾರ ವಹಿವಾಟುಗಳಿಗೆ ತೀವ್ರ ತೊಂದರೆ ಉಂಟಾಗಿತ್ತು. ರಸ್ತೆ ಪುನರಾರಂಭವಾಗುತ್ತಿರುವುದರಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ.
ಸ್ಥಳೀಯರು ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.


