ವಿದ್ಯುತ್‌ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ-MESCOM employees protest against power sector privatization

 SUDDILIVE || SHIVAMOGGA

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಮೆಸ್ಕಾಂ ನೌಕರರ ಪ್ರತಿಭಟನೆ-MESCOM employees protest against power sector privatization

Mescom, protest




ಶಿವಮೊಗ್ಗ, ಜೂ.10: ರಾಜ್ಯದಲ್ಲಿ ವಿದ್ಯುತ್‌ ಕ್ಷೇತ್ರದ ಖಾಸಗೀಕರಣದ ವಿರುದ್ಧ ಕವಿಪ್ರನಿನಿ ಅಧಿಕಾರಿಗಳ ಹಾಗೂ ನೌಕರರ ಒಕ್ಕೂಟ (ಫೆಡರೇಶನ್) ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನಗರದ ವಿದ್ಯುತ್‌ ಭವನದ ಮುಂಭಾಗದಲ್ಲಿರುವ ಮೆಸ್ಕಾಂ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಟಾಟಾ ಪವರ್‌ನಂತಹ ಖಾಸಗಿ ಕಂಪನಿಗಳಿಗೆ ವಿದ್ಯುತ್‌ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು. ವಿದ್ಯುತ್‌ ಖಾಸಗೀಕರಣದಿಂದ ರೈತರು ಮತ್ತು ಸಾಮಾನ್ಯ ಜನರ ಮೇಲೆ ಹೆಚ್ಚುವರಿ ವಿದ್ಯುತ್‌ ಬಿಲ್‌ ಹೊರೆ ಬೀಳುವ ಸಾಧ್ಯತೆ ಇದ್ದು, ಇದು ಜನವಿರೋಧಿ ಕ್ರಮವಾಗಲಿದೆ ಎಂದು ಆರೋಪಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ವಿದ್ಯುತ್‌ ವಿತರಣೆಯ ಹಕ್ಕು ನೀಡುವಂತೆ ಟಾಟಾ ಪವರ್‌ ಕಂಪನಿ ಕೆಇಆರ್‌ಸಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿರುವ ಪ್ರತಿಭಟನಾಕಾರರು, ಈ ಮನವಿಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸಬಾರದು ಎಂದು ಒಕ್ಕೂರಲಿನಿಂದ ಒತ್ತಾಯಿಸಿದರು.

ರೈತರಿಗೆ ಸಬ್ಸಿಡಿ ಸೌಲಭ್ಯಗಳಿಗೆ ಧಕ್ಕೆಯಾಗುವ ಆತಂಕ

ಮೆಸ್ಕಾಂ ಸಾರ್ವಜನಿಕರಿಗೆ ಮತ್ತು ರೈತರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಅದರ ವ್ಯಾಪ್ತಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಐಪಿ ಸೆಟ್‌ಗಳಿವೆ. ಲಕ್ಷಾಂತರ ರೈತರಿಗೆ ವಿದ್ಯುತ್‌ ಪೂರೈಕೆ ಮಾಡುತ್ತಿರುವ ಮೆಸ್ಕಾಂ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಒಂದು ವೇಳೆ ವಿದ್ಯುತ್‌ ವಿತರಣಾ ವ್ಯವಸ್ಥೆ ಖಾಸಗಿ ಕಂಪನಿಗಳ ಕೈಗೆ ಹೋದರೆ ಸರ್ಕಾರದಿಂದ ದೊರೆಯುವ ಸಬ್ಸಿಡಿ ಹಾಗೂ ವಿವಿಧ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಲವರು ಭಾಗಿ

ಪ್ರತಿಭಟನೆಯಲ್ಲಿ ಕವಿಪ್ರನಿ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಜಿ. ಹೇಮಣ್ಣ, ಕವಿಪ್ರನಿ ಇಂಜಿನಿಯರ್‌ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಜಗದೀಶ್, ಲೆಕ್ಕಾಧಿಕಾರಿ ಸಂಘದ ಕೇಂದ್ರ ಸಮಿತಿ ಸದಸ್ಯ ಮಾದೇಶ್, ಕಲ್ಯಾಣ ಸಂಸ್ಥೆಯ ವೃತ್ತ ಸಮಿತಿ ಕಾರ್ಯದರ್ಶಿ ಲೋಕೇಶ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಗೌಡ, ಡಿಪ್ಲೋಮಾ ಇಂಜಿನಿಯರ್‌ ಸಂಘದ ಉಪಾಧ್ಯಕ್ಷ ನವೀನ್ ಕುಮಾರ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಕೆಂಚರಾಜು ಎಂ.ಬಿ., ಕುಮಾರ್, ಸ್ಥಳೀಯ ಸಮಿತಿ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಕಿರಣ್ ಜಿ.ಜೆ. ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸಿದ್ದರು.

MESCOM employees protest against power sector privatization

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close