ಸರ್ಕಾರ ಮತ್ತು ನೌಕರರ ನಡುವೆ ಸೌಹಾರ್ಧ ವಾತಾವರಣ ಕಲ್ಪಿಸಿರುವುದು ಸಂತಸದ ಸಂಗತಿ : ಬಿ.ವೈ.ರಾಘವೇಂದ್ರ-It is a matter of joy that a cordial atmosphere has been created between the government and the employees: B.Y. Raghavendra

SUDDILIVE || SHIVAMOGGA

ಸರ್ಕಾರ ಮತ್ತು ನೌಕರರ ನಡುವೆ ಸೌಹಾರ್ಧ ವಾತಾವರಣ ಕಲ್ಪಿಸಿರುವುದು ಸಂತಸದ ಸಂಗತಿ : ಬಿ.ವೈ.ರಾಘವೇಂದ್ರ-It is a matter of joy that a cordial atmosphere has been created between the government and the employees: B.Y. Raghavendra

Raghavendra, atmosphere

ನೌಕರರ ಸಂಘವು ರಾಜ್ಯ ಸರ್ಕಾರ ಮತ್ತು ಸರ್ಕಾರಿ ನೌಕರರ ನಡುವೆ ಸೇತುವೆಯಾಗಿದ್ದು, ಅಗತ್ಯ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದರ ಜೊತೆಗೆ  ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಸೌಹಾರ್ಧ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಾಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ನೌಕರರ ಸೌಹಾರ್ಧ ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದ ಕು.ಅನಘಾ ಳಿಗೆ ಅಭಿನಂದಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. 

ಕಳೆದ 7-8ವರ್ಷಗಳ ಅವಧಿಯಲ್ಲಿ ಪ್ರತಿವರ್ಷ ರಾಜ್ಯ ಸರ್ಕಾರಿ ನೌಕರರ ಸುಮಾರು 10000ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ನಗದುಪುರಸ್ಕಾರ, ಸ್ಮರಣಿಕೆ ನೀಡಿ, ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸುತ್ತಾ ಬಂದಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಈ ಕಾರ್ಯದಿಂದಾಗಿ ನೌಕರರು ಮಾತ್ರವಲ್ಲ ಅವರ ಕುಟುಂಬದವರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ಎನಿಸಲಿದೆ. ಈ ನೆನಪು ಅಚ್ಚಳಿಯದೆ ಉಳಿಯಲಿದೆ. ಈ ಅಮೂಲ್ಯ ಸಂಪ್ರದಾಯ ಮುಂದುವರೆಸುತ್ತಿರುವುದು ನೌಕರರೆಲ್ಲರಿಗೆ ಅಭಿಮಾನದ ಸಂಗತಿ ಎಂದರು.

ಜಾಗತಿಕವಾಗಿ ಸ್ಪರ್ಧೆ ಏರ್ಪಟ್ಟಿರುವ ಹಾಗೂ ಆಧುನಿಕ ತಂತ್ರಜ್ಞಾನದ ಬರಾಟೆಯಲ್ಲಿ ಮುನ್ನುಗ್ಗುತ್ತಿರುವ ಇಂದಿನ ಯುಗದ ವೇಗಕ್ಕೆ ಎಲ್ಲರೂ ಸಿದ್ಧಗೊಳ್ಳಲೇಬೇಕಾದ ಅಗತ್ಯವಿದೆ. ಇಂಹತ ಸಂದರ್ಭದಲ್ಲಿ ವ್ಯವಸ್ಥೆಯೊಂದಿಗೆ ಮುನ್ನಡೆಯುವುದು ಜಾಣನಡೆ ಎಂದ ಅವರು ಮಹಿಳೆಯರೂ ಸಹ ಪುರುಷರಿಗೆ ಸಮಾನವಾಗಿ ಮುನ್ನಡೆಯುತ್ತಿದ್ದಾರೆ. ಮಹಿಳೆಯರು ಯಾವುದೇ ಹಿಂಜರಿಕೆಯಿಲ್ಲದೆ ವಿಶ್ವಾಸದಿಂದ ಮುನ್ನುಗ್ಗಿ ಗುರಿ ಸಾಧಿಸಬೇಕು. ರಾಮಕೃಷ್ಣ, ಪರಮಹಂಸರ ವಿಚಾರಧಾರೆಗಳನ್ನು, ಅವರ ಆದರ್ಶಗಳನ್ನು ಅನುಸರಿಸಬೇಕೆಂದವರು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ 31ಜಿಲ್ಲೆಗಳಲ್ಲಿಯೂ ಎಸ್.ಎಸ್‌.ಎಲ್.ಸಿ. ಮತ್ತು ಪಿ.ಯು.ಸಿ.ಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಅವರ ಸ್ವಂತ ಜಿಲ್ಲಾ ಕೇಂದ್ರಗಳಲ್ಲಿಯೇ ಕಾರ್ಯಕ್ರಮಗಳನ್ನು ಆಯೋಜಿಸಿ, ತಲಾ 2000/-ರೂ.ಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಕಳೆದ 7ವರ್ಷಗಳಿಂದ ಈ ಕಾರ್ಯಕ್ರಮದ ಅನುಷ್ಟಾನಕ್ಕಾಗಿ 21ಕೋಟಿ ರೂ.ಗಳನ್ನು ವ್ಯಯ ಮಾಡಲಾಗುತ್ತಿದೆ ಎಂದರು.

ಬಹುತೇಕ ನೌಕರರೆಲ್ಲರೂ ಮಧ್ಯಮ ವರ್ಗದವರೆ ಆಗಿರುತ್ತಾರೆ. ತಮ್ಮ ಮಕ್ಕಳ ಸಾಧನೆಗೆ ದೊರೆಯುವ ಗೌರವದಿಂದಾಗಿ ಸಂತುಷ್ಟರಾಗಿರುವುದನ್ನು ಸಂಘಟನೆ ಗುರುತಿಸಿ ಈ ಕಾರ್ಯಕ್ರಮವನ್ನು ಮುಂದುವರೆಸಿದೆ. ಇದರೊಂದಿಗೆ ಮಕ್ಕಳಲ್ಲಿ ಸಮಷ್ಟಿಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯ ಸಮರ್ಪಣೆಗೆ ವೇದಿಕೆ ಅವಕಾಶ ಕಲ್ಪಿಸಿದೆ ಎಂದ ಅವರು ಸಂಘಟನೆಯು ನೌಕರ ಸ್ನೇಹಿ ಮತ್ತು ಜನಸ್ನೇಹಿ ಕಾರ್ಯಕ್ರಮಗಳ ಆಯೋಜನೆ ಮೂಲಕ ದೇಶದ ಮಾದರಿ ಸಂಘಟನೆ ಎನಿಸಿದೆ. ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಇನ್ನಷ್ಟು ಮಹತ್ವದ ವಿಷಯಗಳ ಕುರಿತು ಹೋರಾಟ ಮುಂದುವರೆಸಲಿದೆ. ಈಗಾಗಲೇ ಅನುಷ್ಠಾನಗೊಳಿಸಲಾಗಿರುವ ಅನೇಕ ಯೋಜನೆಗಳಿಗೆ ನೌಕರರು ಫಲಾನುಭವಿಗಳಾಗಿದ್ದಾರೆ. ನೌಕರರ ಆರೋಗ್ಯಕ್ಕೆ ಸಂಬಂಧಿಸಿದಂತೆ 450ಕೋಟಿ ವೆಚ್ಚದ ಆರೋಗ್ಯ ಯೋಜನೆಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಈಗಾಗಲೆ ಚಾಲನೆ ನೀಡಿದ್ದಾರೆ ಎಂದರು.

ಪುರುಷರಿಗೆ ಸಮಾನವಾಗಿ ಕಾರ್ಯ ನಡೆಸುವಲ್ಲಿ ಮಹಿಳೆಯರೂ ಇದ್ದಾರೆ. ವ್ಯಾವಹಾರಿಕವಾಗಿಯೂ, ಕೌಟುಂಬಿಕ ನೆಮ್ಮದಿಗೆ ಮಹಿಳೆ ಸಹಕಾರಿಯಾಗಿದ್ದಾರೆ. ಲಭ್ಯ ಅವಕಾಶಗಳಿಂದಾಗಿ ಮಹಿಳೆ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. 

– ಡಾ. ಆರ್.ಎಂ.ಮಂಜುನಾಥಗೌಡ, ಅ‍ಧ್ಯಕ್ಷರು,  ಮಲೆನಾಡು ಪ್ರದೇಶ ಅಭಿವೃಧ್ಧಿ ಮಂಡಳಿ, 


ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವುದು ಮತ್ತು ಅವರಿಗೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದ್ದು, ಮಹತ್ವ ಪಡೆದಿದೆ. ಅಂತೆಯೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಸಾಧನೆ ಮಾಡಿದ ನೌಕರರ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಗೌರವಿಸಬೇಕಾದ ಅಗತ್ಯವಿದೆ. 

ಪ್ರಭುಲಿಂಗ ಕವಳಿಕಟ್ಟಿ, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ.

ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯೆ ಡಾ ಕೆ.ಎಸ್.ಪವಿತ್ರ ಅವರು ಆರೋಗ್ಯ ಮತ್ತು ಮಹಿಳೆಯ ಕಲ್ಯಾಣ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಮತ್ತು ಶಿವಮೊಗ್ಗ ಆ‍ಶ್ರಮದ ಸ್ವಾಮಿ ವಿನಯಾನಂದ ಸರಸ್ವತಿಯವರು ಉಪನ್ಯಾಸ ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ನೌಕರರ ಪ್ರತಿಭಾವಂತ ಮಕ್ಕಳಿಗೆ ನಗದುಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಸಂಘಗಳ ಪದಾಧಿಕಾರಿಗಳು, ನೆರೆಯ ಜಿಲ್ಲೆಗಳ ನೌಕರರ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ನೌಕರರು, ಅವರ ಕುಟುಂಬದ ಸದಸ್ಯರು, ನೌಕರರ ಪ್ರತಿಭಾವಂತ ಮಕ್ಕಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

It is a matter of joy that a cordial atmosphere has been created between the government and the employees: B.Y. Raghavendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close