SUDDILIVE || SHIVAMOGGA
ಮತ್ತೆ ಮುನ್ನೆಲೆಗೆ ಬಂದ ಕತ್ತಲಘಟ್ಟ ಚೌಡೇಶ್ವರಿ ದೇವಸ್ಥಾನ Vs ಅಕ್ಷರ ಶಾಲೆ ವಿವಾದ- Kattalaghatta Choudeshwari Temple Vs Akshara School Controversy Back in Foreground
2023 ಮಾರ್ಚ್ ನಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದ ಪ್ರಕರಣ ಮೂರು ವರ್ಷಗಳ ನಂತರ ಮತ್ತೆ ಪೊಲೀಸ್ ಠಾಣೆಯ ಕದ ತಟ್ಟಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಅಕ್ಷರ ಶಾಲೆ ಮತ್ತು ಚನ್ನಮುಂಭಾಪುರ ಗ್ರಾಮದ ಕತ್ತಲಘಟ್ಟ ಚೌಡೇಶ್ವರಿ ಹಾಗೂ ಭೂತಪ್ಪಸ್ವಾಮಿ ದೇವಸ್ಥಾನದ ಪೂಜಾ ಹಕ್ಕು ಮತ್ತು ದೇವರ ಸೇವೆಗೆ ಸಂಬಂಧಿಸಿದ ಹಳೆಯ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ.
ದೂರುದಾರ ಶೇಖರಪ್ಪ ಗೋವಿಂದಪ್ಪ ಅವರು ನೀಡಿರುವ ದೂರಿನ ಪ್ರಕಾರ, ಜೂನ್ 4ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ನೀರು ತರಲು ತೆರಳಿದ್ದ ವೇಳೆ ಕುಮಾರ ನಾಯ್ಕ್ ಎಂಬಾತ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ದೇವಸ್ಥಾನದ ಕಚೇರಿ ಕೊಠಡಿಗೆ ಹಾನಿ ಮಾಡಿರುವ ವಿಚಾರ ಪ್ರಸ್ತಾಪಿಸಿ, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳುತ್ತಾ ದೂರುದಾರರೊಂದಿಗೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಅಕ್ಷರ ಕಾಲೇಜಿನ ಕಾರ್ಯದರ್ಶಿ ಅಶೋಕ್ ನಾಯ್ಕ್ ಹಾಗೂ ಪ್ರಾಂಶುಪಾಲ ಗಿರೀಶ್ ಕೂಡ ದೂರುದಾರರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ದೇವಸ್ಥಾನದ ಸಮೀಪ ಮತ್ತೆ ಕಂಡುಬಂದರೆ ಕೈಕಾಲು ಮುರಿದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಕುಮಾರ ನಾಯ್ಕ್, ಅಶೋಕ್ ನಾಯ್ಕ್ ಮತ್ತು ಗಿರೀಶ್ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kattalaghatta Choudeshwari Temple Vs Akshara School Controversy Back in Foreground
