SUDDILIVE || SAGARA
ನಡುರಸ್ತೆಯಲ್ಲೇ ದಗದಗನೆ ಹೊತ್ತಿ ಉರಿದ ಕಾರು; ಕ್ಷಣಾರ್ಧದಲ್ಲಿ ಸುಟ್ಟು ಕರಕಲು-A car bursts into flames in the middle of the road; it burns to ashes in an instant.
ಸಾಗರ: ತಾಲೂಕಿನ ಆನಂದಪುರ ಸಮೀಪದ ಡ್ಯಾಮ್ ಹೊಸೂರು ಹಾಗೂ ಅಂಬಲಿಗೋಳ ಮಧ್ಯದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದು ಏಕಾಏಕಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಘಟನೆ ನಡೆದಿದೆ.
ಶಿಕಾರಿಪುರದಿಂದ ಆಯನೂರು ಸಮೀಪದ ಹಣಗೆರೆ ಕಟ್ಟೆ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹಬ್ಬಿದೆ. ಕಾರಿನಲ್ಲಿ ಒಬ್ಬ ಪುರುಷ, ಮೂವರು ಮಹಿಳೆಯರು ಹಾಗೂ ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಾಯದ ಲಕ್ಷಣ ಕಂಡ ತಕ್ಷಣ ಪ್ರಯಾಣಿಕರು ವಾಹನದಿಂದ ಹೊರಬಂದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಹೊತ್ತಿ ಉರಿದು ಸುಟ್ಟು ಕರಕಲಾಗಿದ್ದು, ಸ್ಥಳೀಯರು ಆತಂಕಗೊಂಡರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಕಾರಿನಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ಘಟನೆಯ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

