ಶಾಲೆ ಆರಂಭವಾಗಿ 15 ದಿನ ಕಳೆದರೂ ಶಿಕ್ಷಕರಿಲ್ಲ: ಮಕ್ಕಳೊಂದಿಗೆ ಪೋಷಕರ ಪ್ರತಿಭಟನೆ, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ-No Teachers Even After 15 Days of School Reopening

SUDDILIVE || SAGARA

ಶಾಲೆ ಆರಂಭವಾಗಿ 15 ದಿನ ಕಳೆದರೂ ಶಿಕ್ಷಕರಿಲ್ಲ: ಮಕ್ಕಳೊಂದಿಗೆ ಪೋಷಕರ ಪ್ರತಿಭಟನೆ, ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ-No Teachers Even After 15 Days of School Reopening: Parents and Students Protest, Anger Against Education Department

Teacher, School

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿ ವ್ಯಾಪ್ತಿಯ ಹಲವು ಸರ್ಕಾರಿ ಶಾಲೆಗಳಲ್ಲಿ ತೀವ್ರ ಶಿಕ್ಷಕರ ಕೊರತೆ ಉಂಟಾಗಿದ್ದು, ಶಾಲೆಗಳು ಆರಂಭವಾಗಿ 15 ದಿನ ಕಳೆದರೂ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಾಠ ಬೋಧನೆ ಆರಂಭವಾಗದಿರುವುದಕ್ಕೆ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮರಿ ಸಮೀಪದ ಚದರವಳ್ಳಿ ಹಾಗೂ ಕಳೂರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದ ಕಾರಣ ತರಗತಿಗಳು ಸ್ಥಗಿತಗೊಂಡಿದ್ದು, ಶಾಲೆಗಳು ತೆರೆದಿದ್ದರೂ ಬೋಧನೆ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಭವಿಷ್ಯದ ಬಗ್ಗೆ ಕಳವಳಗೊಂಡ ಪೋಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು. ಶಿಕ್ಷಕರ ನೇಮಕಾತಿ ಅಥವಾ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ವೇಳೆ ಮಾತನಾಡಿದ ಶಾಲಾ ಅಧ್ಯಕ್ಷ ಮಂಜುನಾಥ್, “ಶಾಲೆ ಆರಂಭವಾಗಿ 15 ದಿನ ಕಳೆದರೂ ಶಿಕ್ಷಕರನ್ನು ನಿಯೋಜಿಸಿಲ್ಲ. ನಮ್ಮ ಹೋಬಳಿಯ ಬಹುತೇಕ ಸರ್ಕಾರಿ ಶಾಲೆಗಳ ಪರಿಸ್ಥಿತಿಯೂ ಇದೇ ಆಗಿದೆ. ಕೆಲವು ಶಾಲೆಗಳಲ್ಲಿ ಒಬ್ಬರೂ ಸರ್ಕಾರಿ ಶಿಕ್ಷಕರಿಲ್ಲ. ಕೆಲವೆಡೆ ಅತಿಥಿ ಶಿಕ್ಷಕರ ಮೂಲಕ ಪಾಠ ನಡೆಯುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

ಚದರವಳ್ಳಿ ಮತ್ತು ಕಳೂರು ಶಾಲೆಗಳಷ್ಟೇ ಅಲ್ಲದೆ, ಸುತ್ತಮುತ್ತಲಿನ ಅನೇಕ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಕರ ಕೊರತೆ ತೀವ್ರವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ಅಗತ್ಯ ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿಗಳ ಶಿಕ್ಷಣ ಹಿತ ಕಾಪಾಡಬೇಕು ಎಂದು ಗ್ರಾಮಸ್ಥರು ಹಾಗೂ ಪೋಷಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

No Teachers Even After 15 Days of School Reopening

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close