ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ಬೇಡ; ನಿಯಮಾನುಸಾರವೇ ಜಾರಿಗೆ ತರುತ್ತೇವೆ: ಸಚಿವ ಕೆ.ಜಿ. ಜಾರ್ಜ್- No opposition to Sharavati Pumped Storage project; We will implement it as per rules: Minister K.G. George

 SUDDILIVE || SHIVAMOGGA

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ಬೇಡ; ನಿಯಮಾನುಸಾರವೇ ಜಾರಿಗೆ ತರುತ್ತೇವೆ: ಸಚಿವ ಕೆ.ಜಿ. ಜಾರ್ಜ್-  No opposition to Sharavati Pumped Storage project; We will implement it as per rules: Minister K.G. George  

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅರಣ್ಯಕ್ಕೆ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ. ಕೇವಲ 25 ಎಕರೆ ಪ್ರದೇಶ ಮಾತ್ರ ಪಂಪ್‌ಹೌಸ್‌ಗೆ ಬೇಕಾಗಲಿದ್ದು, ಪೈಪ್‌ಲೈನ್ ಅಳವಡಿಸಿದ ಬಳಿಕ ಮತ್ತೆ ಮಣ್ಣಿನಿಂದ ಮುಚ್ಚಿ ಅರಣ್ಯವನ್ನು ಪುನಃ ಬೆಳೆಸಲಾಗುತ್ತದೆ. ಯೋಜನೆಯಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ಸುಮಾರು 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಶಿವಮೊಗ್ಗ ಸೇರಿದಂತೆ ರಾಜ್ಯದ ಜನರಿಗೆ ಪ್ರಯೋಜನವಾಗಲಿದೆ ಎಂದು ಇಂಧನ ಸಚಿವ ಕೆ.ಜಿ. ಜಾರ್ಜ್ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶರಾವತಿ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಯಾದ ಬಳಿಕ ನೀರು ಸಮುದ್ರಕ್ಕೆ ಹರಿದು ಹೋಗುತ್ತದೆ. ಆ ನೀರನ್ನು ಪಂಪ್ ಮಾಡಿ ಮತ್ತೆ ಅಣೆಕಟ್ಟಿಗೆ ತಂದು ಕೆಲವೇ ನಿಮಿಷಗಳಲ್ಲಿ ವಿದ್ಯುತ್ ಉತ್ಪಾದಿಸುವುದೇ ಪಂಪ್ಡ್ ಸ್ಟೋರೇಜ್ ಯೋಜನೆಯ ಉದ್ದೇಶ ಎಂದು ವಿವರಿಸಿದರು.

ಯೋಜನೆಗಾಗಿ 125 ಎಕರೆ ಪ್ರದೇಶ ಬಳಸಲಾಗುತ್ತದೆ ಎಂಬ ಮಾತು ಇದ್ದರೂ, ಅಷ್ಟೂ ಪ್ರದೇಶ ಮುಳುಗುವುದಿಲ್ಲ. ಪೈಪ್‌ಲೈನ್ ಕಾಮಗಾರಿಗೆ ಹೆಚ್ಚಿನ ಜಾಗ ಬೇಕಾಗಲಿದ್ದು, ಶಾಶ್ವತವಾಗಿ ಕೇವಲ 25 ರಿಂದ 30 ಎಕರೆ ಮಾತ್ರ ಪಂಪ್‌ಹೌಸ್‌ಗೆ ಬಳಸಲಾಗುತ್ತದೆ. ಬೆಂಗಳೂರು ನೀರು ಸರಬರಾಜು ಯೋಜನೆಯಂತೆ ದೊಡ್ಡ ಪೈಪ್‌ಲೈನ್‌ಗಳನ್ನು ಅಳವಡಿಸಿ ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಗ್ರೀನ್‌ಕೋ ಸಂಸ್ಥೆ ಕೈಗೊಂಡಿರುವ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಭೇಟಿ ಮಾಡಿ ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ಅಲ್ಲಿ ಅತ್ಯುತ್ತಮ ರೀತಿಯಲ್ಲಿ ಯೋಜನೆ ಜಾರಿಯಾಗಿದೆ. ಈ ವ್ಯವಸ್ಥೆಯಲ್ಲಿ ನೀರಿನ ಆವಿಯಾಗುವಿಕೆ ಕೇವಲ ಶೇ.5ರಷ್ಟೇ ಇರುತ್ತದೆ. ನಿರಂತರವಾಗಿ ನೀರನ್ನು ಮರುಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದರು.

ಯೋಜನೆಯಿಂದ ಅರಣ್ಯ, ವನ್ಯಜೀವಿ ಹಾಗೂ ಪಕ್ಷಿಗಳಿಗೆ ಹಾನಿಯಾಗುತ್ತದೆ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಸಚಿವರು, ದೇಶದ ವಿವಿಧ ಭಾಗಗಳಲ್ಲಿ, ಹಿಮಾಲಯ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ ಸುರಂಗ ನಿರ್ಮಾಣ ಕಾಮಗಾರಿಗಳೂ ಪರಿಸರ ನಿಯಮಗಳ ಪ್ರಕಾರವೇ ನಡೆಯುತ್ತಿವೆ. ಅದೇ ರೀತಿ ಈ ಯೋಜನೆಯೂ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡೇ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಯೋಜನೆ ಆರಂಭಿಸುವ ಮೊದಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ ಸೇರಿದಂತೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆಯಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದ ತಜ್ಞರ ಸಮಿತಿಯೂ ಅಧ್ಯಯನ ನಡೆಸಿ ಅನುಮೋದನೆ ನೀಡಿದ ಬಳಿಕವೇ ಕಾಮಗಾರಿ ಆರಂಭಿಸಲಾಗುತ್ತದೆ. ಎಲ್ಲಾ ಕಾನೂನು ಹಾಗೂ ಪರಿಸರ ನಿಯಮಗಳನ್ನು ಪಾಲಿಸಿಕೊಂಡೇ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.

ಶರಾವತಿ ಯೋಜನೆಗೆ ಸಂಬಂಧಿಸಿದಂತೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲಾಗಿದೆ. ಯೋಜನೆಯ ಸಂಪೂರ್ಣ ಮಾಹಿತಿ ತಿಳಿದರೆ ವಿರೋಧಿಸುವ ಅಗತ್ಯವಿಲ್ಲ. ಸರ್ಕಾರ ಯಾರ ಮೇಲೂ ಬಲವಂತವಾಗಿ ಯೋಜನೆ ಹೇರಲು ಮುಂದಾಗಿಲ್ಲ. ನಿಯಮಾನುಸಾರ ಅನುಮತಿಗಳು ದೊರೆತ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಜಿ. ಜಾರ್ಜ್ ಹೇಳಿದರು.

ಗೃಹಜ್ಯೋತಿ ಯೋಜನೆ ಕುರಿತು

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಆತಂಕ ಬೇಡ. ಈಗಾಗಲೇ 1.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅರ್ಹರ ಸೌಲಭ್ಯವನ್ನು ಸರ್ಕಾರ ರದ್ದುಪಡಿಸುವುದಿಲ್ಲ. ಅನರ್ಹರು ಸೌಲಭ್ಯ ಪಡೆದಿರುವ ಬಗ್ಗೆ ಮಾಹಿತಿ ಬಂದಿರುವುದರಿಂದ ಅವರಿಂದ ಮಾತ್ರ ವಿವರಗಳನ್ನು ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಯಾರ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸುವುದಿಲ್ಲ ಎಂದು ಸಚಿವರು ತಿಳಿಸಿದರು.

ಒಂದು ಕುಟುಂಬಕ್ಕೆ ನಿಗದಿಪಡಿಸಿರುವ ಯೂನಿಟ್‌ಗಿಂತ ಹೆಚ್ಚಾಗಿ ಬಳಕೆ ಮಾಡಿದರೆ 200 ಯೂನಿಟ್‌ವರೆಗೆ ಹೆಚ್ಚುವರಿ ಬಳಕೆಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. 200 ಯೂನಿಟ್ ಮೀರಿದರೆ ಪೂರ್ಣ ವಿದ್ಯುತ್ ಬಿಲ್ ಅನ್ವಯವಾಗುತ್ತದೆ. ಬಿಲ್‌ನಲ್ಲಿ ವ್ಯತ್ಯಾಸ ಕಂಡುಬಂದರೆ ಇಂಜಿನಿಯರ್‌ಗಳ ಮೂಲಕ ಪರಿಶೀಲಿಸಿ ತಪ್ಪಿದ್ದರೆ ಸರಿಪಡಿಸಲಾಗುವುದು ಎಂದರು.

ವಿದ್ಯುತ್ ಖಾಸಗೀಕರಣ ಕುರಿತು

ವಿದ್ಯುತ್ ಖಾಸಗೀಕರಣದ ಬಗ್ಗೆ ಜನರಲ್ಲಿ ಅನಗತ್ಯ ಆತಂಕ ಬೇಡ. 2003ರಲ್ಲಿ ಕೇಂದ್ರ ಸರ್ಕಾರವೇ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡಿ ಖಾಸಗೀಕರಣಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಕರ್ನಾಟಕದಲ್ಲಿ ಇದುವರೆಗೆ ಖಾಸಗೀಕರಣ ಆಗಿಲ್ಲ. ಈಗ ಕೆಇಆರ್‌ಸಿಗೆ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಎಸ್ಕಾಂಗಳಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ. ಅಂತಿಮ ಆದೇಶ ಬಂದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಸರ್ಕಾರ ಖಾಸಗೀಕರಣದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‌ಐಆರ್ ಪ್ರಕ್ರಿಯೆ ಕುರಿತು

ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರು ಭಾರತೀಯ ಪ್ರಜೆ ಎಂಬುದನ್ನು ಸಾಬೀತುಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳ ಅಥವಾ ಅಸ್ಸಾಂನಲ್ಲಿ ನುಸುಳುಕೋರರನ್ನು ತಡೆಯುವುದು ಕೇಂದ್ರ ಸರ್ಕಾರದ ಹೊಣೆ. ಆದರೆ ವರ್ಷಗಳಿಂದ ಮತ ಚಲಾಯಿಸುತ್ತಿರುವವರಿಂದಲೇ ಈಗ ದಾಖಲೆ ಕೇಳಲಾಗುತ್ತಿದೆ. ದಾಖಲೆ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ದಾಖಲೆಗಳನ್ನು ಎಲ್ಲರೂ ಸಲ್ಲಿಸಬೇಕು ಎಂದು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿರುವುದಾಗಿ ಹೇಳಿದರು.

ಜಿಲ್ಲಾ ಪರಿಶೀಲನಾ ಸಭೆಗಳ ಕುರಿತು

ತಾವು ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರಲ್ಲ. ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಮಳೆ ಹಾಗೂ ಪ್ರವಾಹ ಪೂರ್ವಸಿದ್ಧತೆ ಸಭೆಗಳನ್ನು ನಡೆಸಲು ಸರ್ಕಾರ ವಿವಿಧ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಕಳುಹಿಸಿದೆ. ಮಳೆಯ ಕೊರತೆ ಇನ್ನೂ ಕಾಣಿಸಿಲ್ಲ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಅಧಿಕೃತ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುವುದು ಎಂದು ಕೆ.ಜಿ. ಜಾರ್ಜ್ ಹೇಳಿದರು.

No opposition to Sharavati Pumped Storage project; We will implement it as per rules: Minister K.G. George

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close