SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡುವಂತೆ ಸಚಿವ ಜಾರ್ಜ್ ಗೆ ಮನವಿ-Request to Minister George to abandon Sharavati Pumped Storage Project
ಶಿವಮೊಗ್ಗ, ಜೂನ್ 30: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೂಡಲೇ ಕೈಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಹೋರಾಟಗಾರರ ಒಕ್ಕೂಟ) ಸಿಂಹಸೇನೆ ಜಿಲ್ಲಾ ಘಟಕವು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗದ ಐಬಿಯಲ್ಲಿರುವ ಹೆಲಿಪ್ಯಾಡ್ ನಲ್ಪಿಯೇ ಸಚಿವರಿಗೆ ಮನವಿ ಸಲ್ಲಿಸಿದ ಸಂಘಟನೆ, ಈ ಯೋಜನೆಯಿಂದ ರಾಜ್ಯಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದ್ದು, ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆ, ಜೋಗ ಜಲಪಾತದ ಸುತ್ತಮುತ್ತಲಿನ ಜೀವ ವೈವಿಧ್ಯತೆ ಹಾಗೂ ಶರಾವತಿ ಕಣಿವೆಯಲ್ಲಿರುವ ಕಾಳಿಂಗ, ಚಿರತೆ, ಕಾಟಿ, ದೊಡ್ಡ ಮಂಗಟ್ಟೆ, ಸಿಂಗಳಿಕ ಬಾಲದ ಕೋತಿ ಸೇರಿದಂತೆ ಅಪರೂಪದ ಪ್ರಾಣಿ-ಪಕ್ಷಿಗಳ ವಾಸಸ್ಥಳಕ್ಕೆ ಧಕ್ಕೆ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ಯೋಜನೆಗಾಗಿ ಸುಮಾರು 16 ಸಾವಿರಕ್ಕೂ ಹೆಚ್ಚು ಬಲಿತ ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಸುರಂಗ ನಿರ್ಮಾಣ ಹಾಗೂ ಸ್ಫೋಟಕ ಬಳಕೆಯಿಂದ ಗುಡ್ಡಗಳು, ಜಲಮೂಲಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ 2008ರಿಂದಲೂ ಈ ಯೋಜನೆಗೆ ಸಂಬಂಧಿಸಿದಂತೆ ಹಲವು ಪರಿಸರ ಹೋರಾಟಗಳು ನಡೆದಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ.
ಇದರಿಂದ ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇದೆ. ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಉಳಿವಿನ ದೃಷ್ಟಿಯಿಂದ ಯೋಜನೆಗೆ ಯಾವುದೇ ಅನುಮತಿ ನೀಡದೇ, ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವಲೆ, ರಾಜ್ಯ ಅಧ್ಯಕ್ಷ ಎಂ. ರವಿಪ್ರಸಾದ್, ಜಿಲ್ಲಾ ಅಧ್ಯಕ್ಷ ಎಂ. ರಮೇಶ್, ಜಿಲ್ಲಾ ಉಪಾಧ್ಯಕ್ಷರಾದ ಭರತ್ ಎಂ., ಪಂಕಜ್, ಸೋಮಶೇಖರ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
