SUDDILIVE || SHIVAMOGGA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ: ಪ್ರಧಾನಿ ಮೋದಿಗೆ ಪತ್ರ ಬರೆಯಲು ನಿರ್ಧಾರ-Opposition to Sharavati Pumped Storage Project: Decision to write a letter to Prime Minister Modi
ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಲ್ಲಿಸಿದ್ದ 18 ಬೇಡಿಕೆಗಳಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯೂ ಸೇರಿತ್ತು. ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡುವಂತೆ ಪ್ರಧಾನಿಗೆ ಪತ್ರ ಬರೆಯಲಾಗುತ್ತಿದ್ದು, ನಂತರ ನಿಯೋಗದೊಂದಿಗೆ ಭೇಟಿ ಮಾಡುವುದಾಗಿ ತಿಳಿಸಿದರು.
ಪರಿಸರಕ್ಕೆ ದೊಡ್ಡ ಹಾನಿ: ಈಶ್ವರಪ್ಪ
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸರಕ್ಕೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದ ಈಶ್ವರಪ್ಪ, ಪರಿಸರ ಇಲಾಖೆಯ ಅಧಿಕಾರಿಗಳ ವರದಿಯಲ್ಲಿ ಯೋಜನೆಗಾಗಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಬೇಕಾಗುತ್ತದೆ ಹಾಗೂ ಸುಮಾರು 16 ಸಾವಿರ ಮರಗಳನ್ನು ಕಡಿದು ಹಾಕಬೇಕಾಗುತ್ತದೆ ಎಂದು ಉಲ್ಲೇಖಿಸಲಾಗಿದೆ ಎಂದರು.
ಕಾಡುಗಳ ನಾಶವೇ ಬರ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದ್ದು, ಪರಿಸರವನ್ನು ಹಾಳುಮಾಡಿ ಯೋಜನೆ ಜಾರಿಗೊಳಿಸುವುದು ಸರಿಯಲ್ಲ. ಪರಿಸರದ ಹಿತದೃಷ್ಟಿಯಿಂದ ಈ ಯೋಜನೆಗೆ ನಮ್ಮ ತೀವ್ರ ವಿರೋಧವಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ವಿಚಾರದಲ್ಲಿ ಗೃಹಸಚಿವರ ವಿರುದ್ಧ ವಾಗ್ದಾಳಿ
ಆರ್‌ಎಸ್‌ಎಸ್‌ನ ಲೆಕ್ಕಪತ್ರಗಳ ಕುರಿತು ಗೃಹಸಚಿವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, "ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಇದ್ದರೆ ಕ್ರಮ ಜರುಗಿಸಲಿ. ಅದು ಸಾಧ್ಯವಿಲ್ಲ ಎಂಬುದು ಗೊತ್ತಿರುವುದರಿಂದಲೇ ಅಪಪ್ರಚಾರ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.
ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಅನುಮಾನಗಳಿದ್ದರೆ ಕಾನೂನುಬದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು. ಚಿತ್ತಾಪುರದಲ್ಲಿ ಈ ಹಿಂದೆ ಆರ್‌ಎಸ್‌ಎಸ್ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದ್ದರೂ ನ್ಯಾಯಾಲಯದ ಮೂಲಕ ಅನುಮತಿ ಪಡೆದು ನಡೆಸಲಾಗಿತ್ತು ಎಂದು ನೆನಪಿಸಿದರು.
ಮೋಹನ್ ಭಾಗವತ್ ಭದ್ರತೆ ವಿಚಾರ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ನೀಡಲಾಗಿರುವ ಜೆಡ್ ಪ್ಲಸ್ ಭದ್ರತೆ ಕುರಿತು ಗೃಹಸಚಿವರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಖಂಡಿಸಿದ ಈಶ್ವರಪ್ಪ, ಭದ್ರತೆ ನೀಡುವುದು ಕೇಂದ್ರ ಸರ್ಕಾರದ ತೀರ್ಮಾನವಾಗಿದ್ದು, ಅದನ್ನು ರಾಜಕೀಯವಾಗಿ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.
ತುರ್ತು ಪರಿಸ್ಥಿತಿಯ ವೇಳೆ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಿದ್ದರೂ ಅದು ಶಾಶ್ವತವಾಗಿರಲಿಲ್ಲ. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ ಈಶ್ವರಪ್ಪ, ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಹಣದ ಕೊರತೆಯಿಂದ ವಿವಿಧ ರೀತಿಯ ಸರ್ಕಸ್ ಮಾಡುತ್ತಿದೆ ಎಂದು ಆರೋಪಿಸಿದರು.
"ಸರ್ಕಾರವೇ ಗ್ಯಾರಂಟಿಯಲ್ಲದ ಸ್ಥಿತಿಯಲ್ಲಿದೆ" ಎಂದು ವ್ಯಂಗ್ಯವಾಡಿದರು.
ಬಿಜೆಪಿಗೆ ಮರಳುವ ಸುಳಿವು
ತಾವು ಬಿಜೆಪಿಯಿಂದ ಹೊರಬಂದಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಕುಟುಂಬ ರಾಜಕಾರಣದ ವಿರುದ್ಧವಾಗಿ ಪಕ್ಷ ತೊರೆದಿದ್ದೇನೆ. ಆದರೆ ನನ್ನ ಹೃದಯ ಇನ್ನೂ ಬಿಜೆಪಿಯಲ್ಲಿದೆ ಎಂದು ಈಶ್ವರಪ್ಪ ಹೇಳಿದರು.
ಹಿರಿಯ ನಾಯಕರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಪಕ್ಷಕ್ಕೆ ಮರಳುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸತತ ಸೋಲು ಅನುಭವಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರಿದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು.
ಜೂನ್ 28ರಂದು ಶರಾವತಿ ಯೋಜನೆ ವಿರುದ್ಧ ಪ್ರತಿಭಟನೆ
ರಾಷ್ಟ್ರಭಕ್ತರ ಬಳಗದ ಮುಖಂಡ ಕೆ.ಇ. ಕಾಂತೇಶ್ ಮಾತನಾಡಿ, ಜೂನ್ 28ರಂದು ಬೆಳಿಗ್ಗೆ 7 ಗಂಟೆಗೆ ಸಾಗರದ ಗಾಂಧಿ ವೃತ್ತದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪರಿಸರ ಹೋರಾಟಕ್ಕೆ ಬೆಂಬಲ ನೀಡಿದವರ ಸಹಯೋಗದಲ್ಲಿ ಸುಮಾರು 50 ಬಸ್‌ಗಳ ಮೂಲಕ ಪ್ರತಿಭಟನಾಕಾರರು ಕಾರ್ಗಲ್‌ನ ಕೆಪಿಸಿಎಲ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತಂತೆ ನ್ಯಾಯಾಲಯವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
