SUDDILIVE. || SHIVAMOGGA
ವಿದ್ಯುತ್ ಖಾಸಗೀಕರಣಕ್ಕೆ ವಿರೋಧ-Opposition to electricity privatization
ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಯವರಿಗೆ ನೀಡುವ ಹುನ್ನಾರ ನಡೆಯುತ್ತಿದ್ದು, ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ (ಟಿಪಿಸಿಎಲ್) ಸಮಾನಾಂತರ ವಿದ್ಯುತ್ ವಿತರಣಾ ಪರವಾನಿಗೆ ನೀಡುವಂತೆ ಈಗಾಗಲೇ ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾಗಿ ಆಯೋಗ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿ ಭಾಗಿದಾರರ ಆಕ್ಷೇಪಣೆ ಅಭಿಪ್ರಾಯವನ್ನು ಸಲ್ಲಿಸಲು ತಿಳಿಸಿದ್ದು, ಈ ಸಂಬಂಧ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಮೆಸ್ಕಾಂ ಕಛೇರಿಯವರೆಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಕೆಪಿಟಿಸಿಎಲ್ ಅಧಿಕಾರಿಗಳಿಂದ ಆಕ್ಷೇಪಣಾ ಅರ್ಜಿಯನ್ನು ಪಡೆದು ಸ್ಥಳದಲ್ಲೇ ಭರ್ತಿಮಾಡಿ ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತನಾಯಕ ಕೆ.ಟಿ.ಗಂಗಾಧರ್ ಇದೊಂದು ಅವೈಜ್ಞಾನಿಕ, ಅಸಂವಿಧಾನಾತ್ಮಕ ಸರ್ಕಾರದ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗದ ಯೋಜನೆಯಾಗಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಲು ಬಿಡುವುದಿಲ್ಲ. ಇದರಿಂದ ದೇಶದ ಬೆನ್ನೆಲುಬು ರೈತರ ಜೀವನ ಬರಡಾಗಲಿದೆ. ರೈತರು ಮತ್ತು ಜನಸಾಮಾನ್ಯರು ಪ್ರತಿ ಯೂನಿಟ್‌ಗೂ ಹೆಚ್ಚಿನ ದರ ತೆರಬೇಕಾಗುತ್ತದೆ. ಖಾಸಗಿ ಕಂಪನಿಗಳ ದೌರ್ಜನ್ಯ ಮತ್ತು ದರ್ಪಕ್ಕೆ ಬಲಿಯಾಗಬೇಕಾಗುತ್ತದೆ. ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ರೈತರು ಮತ್ತು ಕೈಗಾರಿಕೋದ್ಯಮಿಗಳು ನಷ್ಟಕ್ಕೆ ಒಳಗಾಗುತ್ತಾರೆ. ಸಾವಿರಾರು ಕೆಪಿಟಿಸಿಎಲ್ ನೌಕರರು ಉದ್ಯೋಗ ಕಳೆದುಕೊಳ್ಳುತ್ತಾರೆ. ನಿವೃತ್ತ ಉದ್ಯೋಗಿಗಳ ಪಿಂಚಣಿಯ ಮೇಲೆ ಪ್ರಭಾವ ಬೀರುತ್ತದೆ. ಹೊಸ ನೇಮಕಾತಿ ಆಗುವುದಿಲ್ಲ. ಮನಬಂದAತೆ ದರವನ್ನು ಹೆಚ್ಚಿಸುತ್ತಾರೆ. ಈಗಾಗಲೇ ರಾಜ್ಯದ ವಿದ್ಯುತ್ ನಿಗಮನಗಳು ಸದೃಢವಾಗಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಿರುವಾಗ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿಯನ್ನು ಖಾಸಗೀ ಕಂಪನಿಗಳಿಗೆ ನೀಡುವುದನ್ನು ರೈತಸಂಘ ಖಂಡಿಸುತ್ತದೆ ಮತ್ತು ಆಕ್ಷೇಪಿಸುತ್ತದೆ ಎಂದರು.
ಈ ಬಗ್ಗೆ ಈಗಾಗಲೇ ರೈತಸಂಘ ಹಳ್ಳಿಹಳ್ಳಿಗಳಲ್ಲಿ ಪ್ರತಿ ರೈತನ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದು, ಆಕ್ಷೇಪಣಾ ಪತ್ರವನ್ನು ಕೆಪಿಟಿಸಿಎಲ್ ಅಧಿಕಾರಿಗಳಿಗೆ ನೀಡಲು ಪ್ರಾರಂಭಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಾಮೂಹಿಕವಾಗಿ ರೈತರು ಆಕ್ಷೇಪಣೆಯನ್ನು ಸಲ್ಲಿಸಿದರು. ರೈತ ನಾಯಕ ಕೆ.ಟಿ.ಗಂಗಾಧರ್, ಜಗದೀಶ್, ಮಂಜುನಾಥ್ ಸೇರಿದಂತೆ ಹಲವು ರೈತ ನಾಯಕರು ಪಾಲ್ಗೊಂಡಿದ್ದರು.
Opposition to electricity privatization
