ರಾಜಾ ಫಾಲ್ಸ್ ಅಪಾಯಕಾರಿ ಕಲ್ಲಿನ ತುದಿಯಲ್ಲಿ ವಿಡಿಯೋ ಚಿತ್ರೀಕರಣ – ಮೂವರ ವಿರುದ್ಧ ಪ್ರಕರಣ-Video shooting on the edge of the dangerous rock of Raja Falls – Case against three

 SUDDILIVE || SHIVAMOGGA

ರಾಜಾ ಫಾಲ್ಸ್ ಅಪಾಯಕಾರಿ ಕಲ್ಲಿನ ತುದಿಯಲ್ಲಿ ವಿಡಿಯೋ ಚಿತ್ರೀಕರಣ – ಮೂವರ ವಿರುದ್ಧ ಪ್ರಕರಣ-Video shooting on the edge of the dangerous rock of Raja Falls – Case against three    

Raja, falls

ಕಾರವಾರ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜೋಗ ಜಲಪಾತ ಮೈದುಂಬಿ ಹರಿಯುತ್ತಿರುವ ನಡುವೆಯೇ ಕೆಲ ಪ್ರವಾಸಿಗರು ಜೀವದ ಹಂಗು ತೊರೆದು ಅಪಾಯಕಾರಿ ಸಾಹಸಕ್ಕೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರವಾಸಿಗರಿಗೆ ಕಟ್ಟುನಿಟ್ಟಿನ ನಿರ್ಬಂಧವಿದ್ದರೂ ಜೋಗ ಜಲಪಾತದ ರಾಜಾ ಫಾಲ್ಸ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ, ಅಪಾಯಕಾರಿ ಕಲ್ಲುಬಂಡೆಯ ತುದಿಯಲ್ಲಿ ನಿಂತು ವಿಡಿಯೋ ಚಿತ್ರೀಕರಣ ನಡೆಸಿದ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಳೆಯ ಸಂದರ್ಭದಲ್ಲಿ ಜೋಗ ಜಲಪಾತ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಹರಿವು ತೀವ್ರವಾಗಿರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರಾಜಾ ಫಾಲ್ಸ್ ಸೇರಿದಂತೆ ಅಪಾಯಕಾರಿ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಆದರೂ ನಿರ್ಬಂಧವನ್ನು ಉಲ್ಲಂಘಿಸಿದ ಮೂವರು ಯುವಕರು ರಾಜಾ ಫಾಲ್ಸ್‌ನ ಕಲ್ಲುಬಂಡೆಯ ತುದಿವರೆಗೆ ತೆರಳಿ ಸಾಹಸ ಪ್ರದರ್ಶಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳು ಕಲ್ಲಿನ ತುದಿಯಲ್ಲಿ ನಿಂತು ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವರ್ತಿಸಿರುವುದಲ್ಲದೆ, ಆಡಳಿತದ ಆದೇಶವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಜೋಗಿನಕೊಪ್ಪ ಮೂಲದ ಮೋಹನ ಶುಭಕರ ಗೌಡ (26), ಭರತ ಗೌಡ (27) ಹಾಗೂ ಮದನ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ಇವರಲ್ಲಿ ಒಬ್ಬರು ಯೂಟ್ಯೂಬರ್ ಆಗಿದ್ದು, ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೋ ಚಿತ್ರೀಕರಿಸಲು ಈ ಸಾಹಸ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Video shooting on the edge of the dangerous rock of Raja Falls – Case against three

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close