SUDDILIVE || SAGARA
ವಿದ್ಯುತ್ ಖಾಸಗೀಕರಣ ವಿರೋಧಿಸಿ ಸಾಗರ ಬಂದ್ ಯಶಸ್ವಿ; ರೈತ ಸಂಘ-ಹಸಿರು ಸೇನೆ ಹೋರಾಟಕ್ಕೆ ವ್ಯಾಪಕ ಬೆಂಬಲ- Sagar Bandh Successful in Protest Against Power Privatization; Farmers' Association and Hasiru Sene Agitation Receives Widespread Support
ಸಾಗರ: ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಸಾಗರ ಬಂದ್ ಸೋಮವಾರ ಬಹುತೇಕ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆಯಿಂದಲೇ ಮೆಡಿಕಲ್ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು ಹಾಗೂ ಅಡಿಕೆ ವಹಿವಾಟು ಸಂಪೂರ್ಣ ಬಂದ್ ಆಗಿದ್ದವು.
ಆದರೆ ಆಟೋ ರಿಕ್ಷಾಗಳು, ಖಾಸಗಿ ವಾಹನಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿದಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಮತ್ತು ಶಾಲೆಗಳ ಕಾರ್ಯಚಟುವಟಿಕೆಗಳಿಗೂ ಯಾವುದೇ ವ್ಯತ್ಯಯವಾಗಲಿಲ್ಲ.
ಬಂದ್‌ಗೆ ಅಡಿಕೆ ಬೆಳೆಗಾರರು, ಕೈಗಾರಿಕಾ ಹಾಗೂ ಕಾರ್ಮಿಕರ ಸಂಘಗಳು, ಬಸ್ ಮತ್ತು ಹೋಟೆಲ್ ಮಾಲೀಕರ ಸಂಘ, ವರ್ತಕರ ಸಂಘ, ವಕೀಲರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ಸೂಚಿಸಿದವು.
ಚೂನಪ್ಪ ಪೂಜಾರಿ ಬಣದ ದಿನೇಶ್ ಶಿರವಾಳ ಅವರ ನೇತೃತ್ವದಲ್ಲಿ ನಡೆದ ಹೋರಾಟ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಿತು. ಬೆಳಿಗ್ಗೆ 10.30ಕ್ಕೆ ಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ, ಮಾರ್ಕೆಟ್ ರಸ್ತೆ, ಬಿ.ಹೆಚ್. ರಸ್ತೆ, ಅಶೋಕ ರಸ್ತೆ ಹಾಗೂ ಸಾಗರ್ ಹೋಟೆಲ್ ಸರ್ಕಲ್ ಮೂಲಕ ಸಾಗಿತು.
ಬಳಿಕ ಪ್ರತಿಭಟನಾಕಾರರು ಎ.ಸಿ. ಕಚೇರಿಗೆ ತೆರಳಿ ವಿದ್ಯುತ್ ಖಾಸಗೀಕರಣದ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಸ್ತಾವವನ್ನು ಕೈಬಿಡಬೇಕು ಹಾಗೂ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.


