SUDDILIVE || SHIVAMOGGA
ಶಿವಮೊಗ್ಗ: ನರಸಿಂಹ ಕೊಲೆ ಪ್ರಕರಣದಲ್ಲಿ ಐವರು ಪೊಲೀಸರಿಗೆ ಶರಣು, ಬಂಧನ-Shivamogga: Five surrender to police in Narasimha murder case, arrested
ಶಿವಮೊಗ್ಗದಲ್ಲಿ ನಡೆದ ರೌಡಿಶೀಟರ್ ನರಸಿಂಹ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಕೋಟೆ ಪೊಲೀಸ್ ಠಾಣೆಗೆ ಶರಣಾಗಿದ್ದು, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ಅಂಬು ಅಲಿಯಾಸ್ ಅನಿಲ್, ಮಧು, ಕತ್ತೆ ಕಾರ್ತಿಕ್, ರವಿ ಹಾಗೂ ಶಬರೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಶಿವಮೊಗ್ಗ ಕೋಟೆ ಠಾಣೆಗೆ ಕರೆತಂದು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ಆರಂಭಿಸಿದ 24 ಗಂಟೆಗಳೊಳಗೆ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ನಿನ್ನೆ ಸಂಜೆ ಸುಮಾರು 4.45ರ ವೇಳೆಗೆ ಇಸ್ಪೀಟ್ ಅಡ್ಡೆಯೊಂದರಲ್ಲಿ ನುಗ್ಗಿದ್ದ ತಂಡ ನರಸಿಂಹನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಘಟನೆ ನಗರದಲ್ಲಿ ಆತಂಕ ಸೃಷ್ಟಿಸಿತ್ತು.
ಪ್ರಕರಣ ಸಂಬಂಧ ಬಂಧಿತ ಐವರ ವಿರುದ್ಧ ಕಾನೂನು ಕ್ರಮ ಮುಂದುವರಿದಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಇತರ ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Shivamogga: Five surrender to police in Narasimha murder case, arrested
