ಮುಖಾಮುಖಿಯಲ್ಲಿ ಪಾಲಿಕೆ ಆಯುಕ್ತರ ಸಮರ್ಥ ಉತ್ತರ-The Municipal Commissioner's competent answer in a confrontation

 SUDDILIVE || SHIVAMOGGA

ಮುಖಾಮುಖಿಯಲ್ಲಿ ಪಾಲಿಕೆ ಆಯುಕ್ತರ ಸಮರ್ಥ ಉತ್ತರ-The Municipal Commissioner's competent answer in a confrontation    

Muncipal, commission


ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ನಡೆದ ಸಾರ್ವಜನಿಕರ ಮುಖಾಮುಖಿ ಕಾರ್ಯಕ್ರಮದಲ್ಲಿ ಆಸ್ತಿ ತೆರಿಗೆ, ಖಾತೆ ಸಮಸ್ಯೆ, ಚರಂಡಿ, ರಸ್ತೆ, ಕುಡಿಯುವ ನೀರು, ಮೀನು ಮಾರುಕಟ್ಟೆ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ನಾಗರಿಕರು ಗಮನ ಸೆಳೆದರು. ಈ ವೇಳೆ ಪಾಲಿಕೆ ಆಯುಕ್ತರು ಹಲವು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಸ್ತಿ ಮೌಲ್ಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆಯುಕ್ತರು, ಆಸ್ತಿ ಮೌಲ್ಯ ವರ್ಧನೆಯ ಆಧಾರದ ಮೇಲೆ ಅಲ್ಲದೆ ಸ್ಟಾಂಪ್ ಡ್ಯೂಟಿ ಆಧಾರದ ಮೇಲೆ ಶುಲ್ಕ ವಸೂಲಿ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಕುರಿತು 2006ರ ಸುತ್ತೋಲೆ ಹಾಗೂ 2009ರ ಕೌನ್ಸಿಲ್ ನಿರ್ಣಯದ ಅನ್ವಯ 1 ಶೇಕಡಾ ಮಾರುಕಟ್ಟೆ ಮೌಲ್ಯದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಕಲ್ಲೂರು ಮೇಘರಾಜ್, ನಗರದ ಸುಮಾರು 12 ಬಡಾವಣೆಗಳಲ್ಲಿ ಇನ್ನೂ ಖಾತೆ ಸಮಸ್ಯೆ ಬಗೆಹರಿದಿಲ್ಲ. ಬೊಮ್ಮನಕಟ್ಟೆ, ಬಕ್ಕಿನಗರ ಸೇರಿದಂತೆ ಹಲವು ಬಡಾವಣೆಗಳು ಅಕ್ರಮ-ಸಕ್ರಮ ಪ್ರಕ್ರಿಯೆಯಿಂದ ಹೊರಗುಳಿದಿದ್ದು, ಬಿ-ಖಾತೆಯೂ ದೊರೆತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸರ್ಕಾರದ ಗಮನಕ್ಕೆ ವಿಷಯವನ್ನು ತಂದು ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದರು.

ಪರಿಸರ ಕಾರ್ಯಕರ್ತ ರಮೇಶ್ ಮಾತನಾಡಿ, ನವುಲೆ ಕೆರೆಯಲ್ಲಿ ನೀರು ಸಂಗ್ರಹವಾಗದೆ ಚಾನೆಲ್ ಮೂಲಕ ಹರಿದುಹೋಗುತ್ತಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಕೆರೆ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಿ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡ) ಜತೆಗೂಡಿ ಜಂಟಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಶ್ಯಾಮಸುಂದರ್ ಅವರು ನಗರದ ಮೀನು ಮಾರುಕಟ್ಟೆಯ ಅವ್ಯವಸ್ಥೆ ಕುರಿತು ಪ್ರಸ್ತಾಪಿಸಿ, ಹೊಸದಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕೆಂದು ಒತ್ತಾಯಿಸಿದರು. ಜೊತೆಗೆ ಶರಾವತಿ ನಗರ, ಹೊಸನಗರ, ಗಾಂಧಿನಗರ ಹಾಗೂ ಅಮೀರ್ ಅಹಮದ್ ಕಾಲೋನಿಗಳಲ್ಲಿ ಬಾಕ್ಸ್ ಚರಂಡಿಗಳಲ್ಲಿ ನೀರು ಹಿಮ್ಮುಖವಾಗಿ ಹರಿದು ಮನೆಗಳಿಗೆ ನುಗ್ಗುತ್ತಿರುವುದರಿಂದ ಚರಂಡಿ ವಿಸ್ತರಣೆ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಚರಂಡಿ ವಿಸ್ತರಣೆಯ ಕುರಿತೂ ಪರಿಶೀಲನೆ ನಡೆಸಲಾಗುವುದು ಎಂದರು.

ರಾಜಶೇಖರ್ ಅವರು ಸುಭದ್ರ ಪತ್ರ ಹೊಂದಿರುವ ಹಲವರಿಗೆ ಖಾತೆ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು. ವಿನೋಬನಗರ ಹಾಗೂ ಕಲಗಲ್ಲಿಹಳ್ಳಿಯಲ್ಲಿ 13 ಸೈಟ್‌ಗಳಿಗೆ ಅನುಮೋದನೆ ದೊರೆತಿದ್ದರೂ ಸುಮಾರು 165 ಮನೆಗಳು ಇನ್ನೂ ಖಾತೆಯಿಂದ ವಂಚಿತವಾಗಿವೆ ಎಂದು ತಿಳಿಸಿದರು. ಇದೇ ವೇಳೆ ನಗರದಲ್ಲಿ ಕನ್ಸರ್ವೆನ್ಸಿ ಸಮಸ್ಯೆ ನಿವಾರಣೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ವಿಶ್ವೇಶಯ್ಯ ಒತ್ತಾಯಿಸಿದರು. ಆಯುಕ್ತರು ಈ ಕುರಿತು ಅಗತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಶೌಚಾಲಯಗಳ ನಿರ್ವಹಣಾ ಸಮಸ್ಯೆ ಹಾಗೂ ಸ್ಮಾರ್ಟ್ ಶಾಲೆಗಳ ಡಿಜಿಟಲ್ ವ್ಯವಸ್ಥೆಗಳು ರೀಚಾರ್ಜ್ ಕೊರತೆಯಿಂದ ಸ್ಥಗಿತಗೊಂಡಿರುವ ಕುರಿತು ಸಾರ್ವಜನಿಕರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಬಿಎಲ್‌ಒಗಳಾಗಿ ಶಿಕ್ಷಕರ ನೇಮಕ ರಾಷ್ಟ್ರಮಟ್ಟದ ನೀತಿಯಾಗಿದೆ. ಸ್ಮಾರ್ಟ್ ಶಾಲೆಗಳ ರೀಚಾರ್ಜ್ ಸಮಸ್ಯೆಯನ್ನು ಮೂರು ದಿನಗಳೊಳಗೆ ಸರಿಪಡಿಸಲಾಗುವುದು. ಶೌಚಾಲಯಗಳ ನಿರ್ವಹಣೆ ಶಾಲಾ ಆಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದರು.

ವಾದಿ-ಎ-ಹುದಾ ಪ್ರದೇಶದ ನಿವಾಸಿಯೊಬ್ಬರು ರಸ್ತೆ, ಯುಜಿಡಿ, ಡಾಂಬರೀಕರಣ ಹಾಗೂ ಬೀದಿ ದೀಪಗಳ ಸಮಸ್ಯೆ ಕುರಿತು ಮನವಿ ಸಲ್ಲಿಸಿದರು. ನಗರದಲ್ಲಿ ಅಕ್ರಮ ಫ್ಲೆಕ್ಸ್‌ಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಫ್ಲೆಕ್ಸ್ ನಿಯಂತ್ರಣದಲ್ಲಿ ಪಾಲಿಕೆ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಸ್ಥಾಪಿಸಲಾಗಿರುವ ಏಳು ಆರ್‌ಒ ಘಟಕಗಳಲ್ಲಿ ಆರು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಒಟ್ಟಾರೆ, ಸಾರ್ವಜನಿಕರು ಪ್ರಸ್ತಾಪಿಸಿದ ವಿವಿಧ ಸಮಸ್ಯೆಗಳ ಕುರಿತು ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಭರವಸೆ ನೀಡಿದರು.

ವಸಂತ್ ಮಾತನಾಡಿ, ಖಾಸಗಿ ಬಸ್ ನಿಲ್ದಾಣದಲ್ಪಿ ಕುಡಿಯುವ ನೀರು ಶೌಚಾಲಯದ ಸಮ್ಯೆಯಿದೆ ಪಾರ್ಕಿಂಗ್ ಇಲ್ಲ, ಸ್ವಚ್ಛತೆಯಿಲ್ಲ ಸೆಕ್ಯೂರಿಟಿಯಿಲ್ಲ ಅನೈತಿಕ ಚಟುವಟಿಕೆಯ ಆಗರವಾಗಿದೆ ಗಮನ ಹರಿಸಿ ಎಂದು ಆಕ್ಷೇಪಿಸಿದರು. ಆಯುಕ್ತರು ಮಾತನಾಡಿ, ಬಸ್ ಏಜೆಂಟ್ ರ ಜೊತೆ ಮಾತನಾಡಿ ಸ್ವಚತಛತೆಗೆ ಒತ್ತು ನೀಡಲಾಗಿದೆ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಸಿ ಟಿವಿ ಅಳವಡಿಸಲಾಗಿದೆ. ಸಮಸ್ಯೆಗಳನ್ನ ಪರಿಶೀಲಿಸುವುದಾಗಿ ಭರವಸೆ ನೀಡಿದರು. 

The Municipal Commissioner's competent answer in a confrontation 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close