SUDDILIVE || SHIVAMOGGA
ರಾಜ್ಯದ ವಿದ್ಯುತ್ ವಿತರಣಾ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ: ಟಾಟಾ ಪವರ್ ಅರ್ಜಿ ತಿರಸ್ಕರಿಸುವಂತೆ ಕದಂಬ ಕನ್ನಡ ವೇದಿಕೆ ಮನವಿ-Opposition to privatization of state's electricity distribution sector: Kadamba Kannada Vedike requests rejection of Tata Power's application
ಶಿವಮೊಗ್ಗ: ರಾಜ್ಯದ ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಯಾದ ಪ್ರವೇಶಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ, ಕದಂಬ ಕನ್ನಡ ವೇದಿಕೆ ವತಿಯಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಹಾಗೂ ಸೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ಟಾಟಾ ಪವರ್ ವಿದ್ಯುತ್ ವಿತರಣೆ ಮಾಡಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವೇದಿಕೆ ತಿಳಿಸಿದೆ. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಬಾರದು ಎಂಬುದು ಸರ್ಕಾರದ ನಿಲುವಾಗಿದ್ದರೂ, ಖಾಸಗಿ ಕಂಪನಿ ಪರವಾನಗಿ ಕೋರಿ ಮುಂದಾಗಿರುವುದು ಸಾರ್ವಜನಿಕರು ಹಾಗೂ ವಿದ್ಯುತ್ ನೌಕರರಲ್ಲಿ ಕಳವಳ ಮೂಡಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆ ಗ್ರಾಮೀಣ ವಿದ್ಯುದೀಕರಣ, ರೈತರಿಗೆ ಉಚಿತ ಹಾಗೂ ರಿಯಾಯಿತಿ ವಿದ್ಯುತ್, ಭಾಗ್ಯಜ್ಯೋತಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಇಂತಹ ಸೇವಾ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳ ಪ್ರವೇಶದಿಂದ ಸರ್ಕಾರದ ನಿಯಂತ್ರಣ ಕಡಿಮೆಯಾಗುವ ಸಾಧ್ಯತೆಯಿದ್ದು, ಗ್ರಾಹಕರ ಮೇಲೆ ಹೆಚ್ಚುವರಿ ದರಭಾರ ಬೀಳುವ ಆತಂಕವಿದೆ ಎಂದು ವೇದಿಕೆ ಎಚ್ಚರಿಸಿದೆ.
ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿದರೆ ರೈತರು, ಗ್ರಾಹಕರು ಹಾಗೂ ವಿದ್ಯುತ್ ನೌಕರರ ಹಿತಾಸಕ್ತಿಗೆ ಧಕ್ಕೆ ಉಂಟಾಗಬಹುದು. ಜೊತೆಗೆ ಉದ್ಯೋಗ ಭದ್ರತೆ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ವಿದ್ಯುತ್ ಕಾಯ್ದೆ-2003ರ ಸೆಕ್ಷನ್ 108ರ ಅಡಿಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ, ಟಾಟಾ ಪವರ್ ಕಂಪನಿಯ ಪರವಾನಗಿ ಅರ್ಜಿಯನ್ನು ತಿರಸ್ಕರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಕದಂಬ ಕನ್ನಡ ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಗೌಡ, ಜಿಲ್ಲಾಧ್ಯಕ್ಷ ಗಂಗಾಧರ ಎಸ್., ಜಿಲ್ಲಾ ಸಂಚಾಲಕರಾದ ರಾಜೀವ್, ಲಕ್ಷ್ಮೀಶ್, ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
