SUDDILIVE || SHIVAMOGGA
ಶಿವಮೊಗ್ಗದಲ್ಲಿ ದುರಂತ: ಕ್ರೇನ್ ಚಕ್ರ ಹರಿದು ಕಾರ್ಮಿಕ ಸ್ಥಳದಲ್ಲೇ ಸಾವು- Tragedy in Shivamogga: Crane wheel breaks, worker dies on the spot
ಶಿವಮೊಗ್ಗ, ಜೂನ್ 6: ನಗರದ ಹೊಸಮನೆ ಬಡಾವಣೆಯ 3ನೇ ಕ್ರಾಸ್‌ನಲ್ಲಿರುವ ದೊಡ್ಡಮ್ಮ ದೇವಾಲಯದ ಬಳಿ ಶನಿವಾರ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬರು ಕ್ರೇನ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಪಿಲಿಗೂಡು ಗ್ರಾಮದ ನಿವಾಸಿ ನಾಗೇಶ್ (48) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಹೊಸಮನೆಯಲ್ಲಿರುವ ದೊಡ್ಡಮ್ಮ ದೇವಾಲಯದ ಗೋಪುರ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡಲು ನಾಗೇಶ್ ಅವರು ಶುಕ್ರವಾರ ತಮ್ಮ ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಕಾಮಗಾರಿ ನಡೆಯುತ್ತಿದ್ದ ವೇಳೆ ದೇವಾಲಯದ ಮುಂಭಾಗದಿಂದ ಕಲ್ಲುಗಳನ್ನು ಸಾಗಿಸಿಕೊಂಡು ಕ್ರೇನ್ ರಿವರ್ಸ್ ಬರುತ್ತಿತ್ತು.
ಈ ಸಂದರ್ಭದಲ್ಲಿ ನಾಗೇಶ್ ಅವರು ಆಕಸ್ಮಿಕವಾಗಿ ಎಡವಿ ಬಿದ್ದಿದ್ದು, ಕ್ರೇನ್‌ನ ಮುಂಭಾಗದ ಚಕ್ರಗಳು ಅವರ ತಲೆಯ ಮೇಲೆ ಹರಿದಿವೆ. ಪರಿಣಾಮ ತಲೆಗೆ ತೀವ್ರ ಗಾಯವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Tragedy in Shivamogga: Crane wheel breaks, worker dies on the spot

