SUDDILIVE || SHIVAMOGGA
ಶರಾವತಿ ಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟ: ಕೆ.ಜೆ. ಜಾರ್ಜ್ ವಿರುದ್ಧ ಈಶ್ವರಪ್ಪ ವಾಗ್ದಾಳಿ- Violent protest if Sharavati project is not abandoned: Eshwarappa lashes out at K.J. George
ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಕುರಿತು ಮಾತನಾಡುವ ಸರ್ಕಾರವೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಹಠ ಹಿಡಿದಿರುವುದು ಏಕೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಪ್ರಶ್ನಿಸಿದರು.
ಯೋಜನೆಯಿಂದ ಉತ್ಪಾದಿಸಬೇಕಾದ ವಿದ್ಯುತ್‌ಗೆ ಪರ್ಯಾಯ ಮಾರ್ಗಗಳ ಬಗ್ಗೆ ಪರಿಸರವಾದಿಗಳು ಈಗಾಗಲೇ ಸಲಹೆಗಳನ್ನು ನೀಡಿದ್ದಾರೆ. ಆರಂಭದಲ್ಲಿ ₹3,500 ಕೋಟಿ ವೆಚ್ಚ ಎಂದು ಹೇಳಲಾಗಿದ್ದ ಯೋಜನೆಯ ಅಂದಾಜು ಈಗ ₹10,500 ಕೋಟಿಗೆ ಏರಿಕೆಯಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶವಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ ಎಂದು ಆರೋಪಿಸಿದರು.
ಈ ಸಂಬಂಧ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ ಅವರು, ರಾಜ್ಯ ಸರ್ಕಾರದಿಂದ ಒತ್ತಡ ಇದ್ದರೂ ಕೇಂದ್ರ ಸರ್ಕಾರ ಈ ಯೋಜನೆಗೆ ತ್ವರಿತ ಅನುಮೋದನೆ ನೀಡುವ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂದು ಸಚಿವರು ತಿಳಿಸಿರುವುದಾಗಿ ಹೇಳಿದರು.
ಯೋಜನೆ ಕೈಬಿಡುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿವಿಧ ತಜ್ಞರ ಸಮಿತಿಗಳೂ ಯೋಜನೆಗೆ ವಿರೋಧ ವ್ಯಕ್ತಪಡಿಸಿ ವರದಿ ಸಲ್ಲಿಸಿವೆ. ಹೀಗಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಅವರು ಯೋಜನೆಯನ್ನು ಕೈಬಿಡಬೇಕು. ಸರ್ಕಾರ ಮುಂದುವರಿಸಲು ಯತ್ನಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜೂನ್ 28ರಂದು 'ಕಾರ್ಗಲ್ ಚಲೋ' ಹೋರಾಟ
ರಾಷ್ಟ್ರಭಕ್ತರ ಬಳಗದ ಶ್ರೀಕಾಂತ್ ಮಾತನಾಡಿ, ಶರಾವತಿ ಯೋಜನೆ ವಿರೋಧಿಸಿ ಜೂನ್ 28ರಂದು "ಕಾರ್ಗಲ್ ಚಲೋ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಫ್ರೀಡಂ ಪಾರ್ಕ್‌ನಿಂದ 108 ಬಸ್‌ಗಳ ಮೂಲಕ ಕಾರ್ಯಕರ್ತರು ಸಾಗರದ ಕಾರ್ಗಲ್‌ಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಬಿಳಕಿ ಮಠದ ರಾಜಯೋಗೇಶ್ವರ ಶ್ರೀಗಳು ಹಾಗೂ ತ್ಯಾವರೆಕೆರೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ರಾಮಮಂದಿರ ದೇಣಿಗೆ ದುರ್ಬಳಕೆ ಆರೋಪದ ತನಿಖೆಗೆ ಆಗ್ರಹ
ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರ್ಬಳಕೆ ಮತ್ತು ಕಳ್ಳತನದ ಆರೋಪಗಳು ರಾಮಭಕ್ತರಿಗೆ ಆಘಾತ ಉಂಟುಮಾಡಿವೆ ಎಂದು ಈಶ್ವರಪ್ಪ ಹೇಳಿದರು.
ಈ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳನ್ನು ಆರು ತಿಂಗಳ ಹಿಂದೆಯೇ ತೆರವುಗೊಳಿಸಲಾಗಿದ್ದು, ಚಿನ್ನಾಭರಣ ಕಳುವಿನ ಆರೋಪಗಳು ಕೂಡ ಕೇಳಿಬಂದಿವೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಅನಗತ್ಯವಾಗಿ ಎಳೆದು ತರುವುದು ಸರಿಯಲ್ಲ. ಯಾರೇ ತಪ್ಪಿತಸ್ಥರಾಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ರಾಮಮಂದಿರದ ಮೇಲಿನ ಭಕ್ತರ ನಂಬಿಕೆ ಉಳಿಯುವಂತೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
