ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ-Woman dies at Meggan Hospital: Doctors accused of negligence
ದೇಹದ ಸಕ್ಕರೆ ಮಟ್ಟದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರಾವತಿ ನಗರದ ನಕ್ಷತ್ರಮ್ಮ (ಸುಮಾರು 45 ವರ್ಷ) ಅವರು ಸಕ್ಕರೆ ಮಟ್ಟದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಕುಟುಂಬಸ್ಥರೊಂದಿಗೆ ಇಂದು ಬೆಳಿಗ್ಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ನಕ್ಷತ್ರಮ್ಮ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹಾಗೂ ಮಹಿಳೆ ತೀವ್ರ ಅಸ್ವಸ್ಥತೆಯಿಂದ ನರಳುತ್ತಿದ್ದಾಗ ವೈದ್ಯರು ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತರ ಕುಟುಂಬದವರ ಪ್ರಕಾರ, ಮಧ್ಯಾಹ್ನ ಮಹಿಳೆ ಎದೆ ಉರಿಯುತ್ತಿದೆ ಎಂದು ಹೇಳಿದ್ದು, ಬಳಿಕ ಶೌಚಾಲಯಕ್ಕೆ ಹೋಗಬೇಕೆಂದು ತಿಳಿಸಿದ್ದಾರೆ. ಈ ವೇಳೆ ಅವರ ಮುಖಕ್ಕೆ ಅಳವಡಿಸಲಾಗಿದ್ದ ಆಮ್ಲಜನಕ ಮಾಸ್ಕ್ ಅನ್ನು ತೆಗೆದುಹಾಕಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಯ ಮಾಸ್ಕ್ ಅನ್ನು ಏಕೆ ತೆಗೆದುಹಾಕಲಾಯಿತು ಎಂದು ಕುಟುಂಬಸ್ಥರು ಪ್ರಶ್ನಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ನಕ್ಷತ್ರಮ್ಮ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Woman dies at Meggan Hospital: Doctors accused of negligence

