SUDDILIVE || SHIVAMOGGA
ಜಾಗದ ವಿವಾದಕ್ಕೆ ಮಹಿಳೆ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ-Woman murdered over land dispute: Accused gets life sentence
ಶಿವಮೊಗ್ಗ, ಜು. 21: ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರದ ಪ್ರಕಾರ, 2020ರ ಆಗಸ್ಟ್ 25ರಂದು ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಸಮನವಳ್ಳಿ ಗ್ರಾಮದ ನಿವಾಸಿ ರಾಜೇಶ್ವರಿ (35) ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯ ಮುಂದೆ ಕುಳಿತಿದ್ದ ವೇಳೆ, ಅದೇ ಗ್ರಾಮದ ಮಂಜುನಾಥ್ ಬಿನ್ ಆನಂದಪ್ಪ (25) ಜಾಗದ ವಿಚಾರವಾಗಿ ಜಗಳಕ್ಕೆ ಮುಂದಾಗಿದ್ದಾನೆ.
ಈ ವೇಳೆ ವಿವಾದ ತೀವ್ರಗೊಂಡಿದ್ದು, ಪ್ರಕರಣದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ರಾಜೇಶ್ವರಿ ಅವರು ತೆರಳಲು ಮುಂದಾದಾಗ, ಆರೋಪಿ ಏಕಾಏಕಿ ಮಚ್ಚಿನಿಂದ ಅವರ ತಲೆಗೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ರಾಜೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿತ್ತು.
ಘಟನೆಯ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2020 ದಾಖಲಿಸಿಕೊಂಡು, ಭಾರತೀಯ ದಂಡ ಸಂಹಿತೆಯ ಕಲಂ 504 (ಉದ್ದೇಶಪೂರ್ವಕ ಅವಮಾನ) ಹಾಗೂ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಸೊರಬ ವೃತ್ತದ ಸಿಪಿಐ ಆರ್.ಡಿ. ಮರುಳ ಸಿದ್ದಪ್ಪ ಅವರು ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್‌ಶೀಟ್) ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯಕ ಅವರು ಸಮರ್ಥವಾಗಿ ವಾದ ಮಂಡಿಸಿದರು.
ಸಾಕ್ಷ್ಯಾಧಾರಗಳು ಹಾಗೂ ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿತನ ವಿರುದ್ಧದ ಆರೋಪಗಳು ಅನುಮಾನಾತೀತವಾಗಿ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟಿತು. ಇದರ ಆಧಾರದ ಮೇಲೆ ಮಾನ್ಯ ನ್ಯಾಯಾಧೀಶರಾದ ರವೀಂದ್ರ ಆರ್. ಅವರು ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
