SUDDILIVE || SHIVAMOGGA
ಶಿವಮೊಗ್ಗದಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 50 ಜನರಿಗೆ ಲಕ್ಷ ಲಕ್ಷ ರೂ ವಂಚನೆ; ಐವರ ವಿರುದ್ಧ ಎಫ್‌ಐಆರ್- 50 people were duped of lakhs of rupees by promising government jobs in Shivamogga; FIR against five
ಸರ್ಕಾರಿ ಇಲಾಖೆಗಳಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಕಲಿ ನೇಮಕಾತಿ ಆದೇಶಗಳನ್ನು ನೀಡಿ ವಂಚಿಸಿರುವ ಆರೋಪದಡಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಭದ್ರಾವತಿಯ ಹೊಸಮನೆ, ಕುವೆಂಪುನಗರ ನಿವಾಸಿ ರೂಪಾ ರವೀಂದ್ರ ರಾವ್ ಅವರು ನೀಡಿದ ದೂರಿನ ಮೇರೆಗೆ, ಸಚಿನ್ (ಎ-1), ಸ್ವಪ್ನಾ (ಎ-2), ಸುಜಾತಾ (ಎ-3), ಕೇಶವ (ಎ-4) ಹಾಗೂ ಶಾಲಿನಿ (ಎ-5) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 3(5), 318(4) ಹಾಗೂ 319(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, 2025ರ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಸ್ನೇಹಿತೆ ಜಯಶ್ರೀ ಮೂಲಕ ಶಿವಮೊಗ್ಗ ನಗರದ ದುರ್ಗಿಗುಡಿ 3ನೇ ಕ್ರಾಸ್‌ನಲ್ಲಿರುವ ಸಚಿನ್ ಅವರ ಕಚೇರಿಗೆ ಪರಿಚಯವಾಗಿದ್ದು, ಸರ್ಕಾರಿ ಉದ್ಯೋಗಗಳಿಗೆ ತರಬೇತಿ ನೀಡಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಲಾಗಿದೆ. ಒಬ್ಬರಿಗೆ ₹5.50 ಲಕ್ಷ ಹಣ ನೀಡಬೇಕೆಂದು ತಿಳಿಸಿದ್ದು, ತನ್ನ ಮಗನಿಗೆ ಎಸ್‌ಡಿಎ ಹುದ್ದೆ ಕೊಡಿಸುವುದಾಗಿ ನಂಬಿಸಲಾಗಿದೆ.
ದೂರುದಾರರು 12-09-2025ರಂದು ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಸಚಿನ್ ಅವರ ಖಾತೆಗೆ ₹1.50 ಲಕ್ಷ ಜಮಾ ಮಾಡಿದ್ದಾರೆ. ನಂತರ ಮತ್ತೊಮ್ಮೆ ₹1.50 ಲಕ್ಷದ ಚೆಕ್ ನೀಡಿದ್ದು, ಬಳಿಕ ₹90 ಸಾವಿರವನ್ನು ಮತ್ತೊಂದು ಕೆನರಾ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಜೊತೆಗೆ ಫೋನ್‌ಪೇ ಹಾಗೂ ನಗದು ರೂಪದಲ್ಲೂ ಹಣ ಪಾವತಿಸಿದ್ದು, ಒಟ್ಟಾರೆ ₹8,50,330 ಹಣವನ್ನು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಸುಜಾತಾ ಮತ್ತು ಸ್ವಪ್ನಾ ಎಂಬವರು ತರಬೇತಿ ನೀಡುತ್ತಿದ್ದು, ಅಭ್ಯರ್ಥಿಗಳ ಹಾಜರಾತಿ ಪಡೆದು ಹಣ ಸಂಗ್ರಹಿಸುತ್ತಿದ್ದರು. ಕೇಶವ ಎಂಬಾತ ಎಇಇ ಹುದ್ದೆಯ ಪರೀಕ್ಷೆ ಹೇಗೆ ಬರೆಯಬೇಕು ಎಂಬುದರ ಕುರಿತು ಮಾಹಿತಿ ನೀಡುತ್ತಿದ್ದ. ಶಾಲಿನಿ ಅವರು ಡಿಸಿ ಕಚೇರಿಯಲ್ಲಿ ಆರ್‌ಐ ಹುದ್ದೆ ಕೊಡಿಸುವುದಾಗಿ ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಾದ ಬಳಿಕ ದೂರುದಾರರ ಮಗಳು ಪೂಜಾ ಅವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಉದ್ಯೋಗ ದೊರೆತಿದೆ ಎಂದು ತೋರಿಸಿ, ಸರ್ಕಾರಿ ಲೋಗೋ ಹೊಂದಿರುವ ನಕಲಿ ನೇಮಕಾತಿ ಆದೇಶವನ್ನು 24-04-2026ರಂದು ನೀಡಲಾಗಿದೆ. ನಂತರ ಜಿಲ್ಲಾಧಿಕಾರಿ ಕಚೇರಿಗೆ ಕರೆಯಿಸಿ ಕಾಯಿಸಿದರೂ ಕೆಲಸಕ್ಕೆ ಸೇರಿಸದೇ ವಿವಿಧ ಕಾರಣಗಳನ್ನು ಹೇಳಿ ಕಾಲಹರಣ ಮಾಡಲಾಗಿದೆ ಎಂದು ದೂರಲಾಗಿದೆ.
ಸಚಿನ್ ಅವರ ದುರ್ಗಿಗುಡಿ ಕಚೇರಿಗೆ ತೆರಳಿದಾಗ, ತಮ್ಮಂತೆಯೇ ಅನೇಕ ಮಂದಿ ಉದ್ಯೋಗದ ನಿರೀಕ್ಷೆಯಲ್ಲಿ ಹಣ ನೀಡಿ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಬಳಿಕ ಪರಸ್ಪರ ಮಾಹಿತಿ ಹಂಚಿಕೊಂಡಾಗ ಹಲವರಿಂದ ಉದ್ಯೋಗದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಂಚನೆಗೊಳಗಾದವರಲ್ಲಿ ಮಲ್ಲಾ ಎನ್.ಎನ್. (₹3.30 ಲಕ್ಷ), ವಿಜಯನಾಥ ಎಲ್.ಎಸ್. (₹1.27 ಲಕ್ಷ), ವರುಣ್ ಆರ್. (₹3.50 ಲಕ್ಷ), ಸೋಮು (₹2.50 ಲಕ್ಷ), ಗಾಯತ್ರಿ ಎನ್. (₹2.45 ಲಕ್ಷ), ಅಭಿನಯ (₹3 ಲಕ್ಷ), ವರುಣ್ ಎಸ್. (₹2.25 ಲಕ್ಷ), ಮೋಹನ್ (₹2.50 ಲಕ್ಷ), ಭಾಗ್ಯಶ್ರೀ (₹3.50 ಲಕ್ಷ), ಸುದೀಪ್ (₹1.50 ಲಕ್ಷ), ಪವಿತ್ರಾ (₹2.20 ಲಕ್ಷ), ಎಂ.ಜಿ. ಮಂಜುನಾಥ್ (₹4.50 ಲಕ್ಷ), ಕುಶಾಲ್ ಆರ್.ವಿ. (₹3.10 ಲಕ್ಷ), ನಯನ್ ಕುಮಾರ್ (₹3.80 ಲಕ್ಷ), ಕಿರಣ್ ಜಿ.ವೈ. (₹1.80 ಲಕ್ಷ), ಹರೀಶ್ ಡಿ. (₹3 ಲಕ್ಷ), ತೇಜಸ್ (₹5.45 ಲಕ್ಷ), ಹೇಮಂತ್ ಕುಮಾರ್ ಡಿ. (₹2 ಲಕ್ಷ), ಅಂಜುಳ (₹3.03 ಲಕ್ಷ), ಸುರೇಶ್ ಆರ್. (₹2 ಲಕ್ಷ), ಹರ್ಷ ಪಿ. (₹1.50 ಲಕ್ಷ), ಜೀವಿತಾ (₹3 ಲಕ್ಷ), ಗಣೇಶ್ ಕೆ.ಎಸ್. (₹2.95 ಲಕ್ಷ), ಚೈತ್ರಾ (₹2.40 ಲಕ್ಷ), ಪ್ರೇಮಾ ಬಿ. (₹2.50 ಲಕ್ಷ), ಸಚಿನ್ ಬಿ.ಎಸ್. (₹2.50 ಲಕ್ಷ), ಪ್ರಶಾಂತ್ ಕೆ. (₹3.35 ಲಕ್ಷ), ಪಲ್ಲವಿ (₹3.50 ಲಕ್ಷ), ಅಭಿಷೇಕ್ (₹3.20 ಲಕ್ಷ), ಕಾವ್ಯಶ್ರೀ (₹1.70 ಲಕ್ಷ), ಸತೀಶ್ (₹1.50 ಲಕ್ಷ), ಸತ್ಯಮೂರ್ತಿ (₹3.50 ಲಕ್ಷ), ಚಂದನ್ ಪಾಂಡೆ (₹2,18,700), ಗುರುಪುತ್ರ ಚಂದನ್‌ವಾರ್ (₹1.95 ಲಕ್ಷ), ಶ್ರೀಶ (₹3.25 ಲಕ್ಷ), ಕಾರ್ತಿಕ್ ಡಿ.ಕೆ. (₹3.80 ಲಕ್ಷ), ಹೇಮಂತ್ ಎಂ. (₹3.50 ಲಕ್ಷ), ಚಂದ್ರ (₹1.20 ಲಕ್ಷ), ಹೇಮಂತ್ (₹3 ಲಕ್ಷ), ವಿಶಾಲ್ (₹2.90 ಲಕ್ಷ), ಸಂಜನಾ (₹2.80 ಲಕ್ಷ), ಸುರೇಶ್ (₹1.65 ಲಕ್ಷ), ಗಾಯತ್ರಿ (₹2 ಲಕ್ಷ), ಸಿಂಧು (₹4.90 ಲಕ್ಷ), ಅಜಯ್ ಕುಮಾರ್ (₹1.20 ಲಕ್ಷ), ಸೌಮ್ಯ ಸುರೇಶ್ (₹3 ಲಕ್ಷ), ಸತ್ಯವೇಲು (₹1.95 ಲಕ್ಷ) ಹಾಗೂ ಮುರುಗನ್ (₹1.95 ಲಕ್ಷ) ಸೇರಿ ಹಲವರಿಂದ ಹಣ ಪಡೆದು ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಸರ್ಕಾರಿ ಇಲಾಖೆಗಳಲ್ಲಿ ನೇರ ನೇಮಕಾತಿ ಮಾಡಿಸಿಕೊಡುವುದಾಗಿ ನಂಬಿಸಿ ಹಣ ಪಡೆದು, ವಿವಿಧ ಇಲಾಖೆಗಳ ನಕಲಿ ನೇಮಕಾತಿ ಆದೇಶಗಳನ್ನು ಸೃಷ್ಟಿಸಿ ನೀಡುವ ಮೂಲಕ ವಂಚನೆ ನಡೆಸಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
50 people were duped of lakhs of rupees by promising government jobs in Shivamogga; FIR against five

