SUDDILIVE || SHIVAMOGGA
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಗೆ ಹೆಚ್ಚುವರಿ ಹೊಣೆ- Additional responsibility given to Shivamogga Deputy Commissioner Prabhulinga Kavalikatti
ಜು.10: ರಾಜ್ಯ ಸರ್ಕಾರವು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಐಎಎಸ್ (KN:2013) ಅವರಿಗೆ ಮತ್ತೊಂದು ಮಹತ್ವದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದೆ. ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್ (MPM) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ (Managing Director) ಹುದ್ದೆಯ ಸಮವರ್ತಿ (Concurrent Charge) ಹೊಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಸೂಚನೆ ಹೊರಡಿಸಿದೆ.
ಜುಲೈ 10, 2026ರಂದು ಹೊರಡಿಸಿರುವ e-DPAR 183 SAS 2026 ಅಧಿಸೂಚನೆಯ ಪ್ರಕಾರ, ಈ ಹುದ್ದೆಯ ಹೆಚ್ಚುವರಿ ಹೊಣೆ ಹೊತ್ತಿದ್ದ ಗುರುದತ್ತ ಹೆಗಡೆ, ಐಎಎಸ್ ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯಪಾಲರ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಹಾಂತೇಶ್ ಅವರು ಅಧಿಸೂಚನೆಗೆ ಸಹಿ ಹಾಕಿದ್ದಾರೆ.
ಪ್ರಸ್ತುತ ಪ್ರಭುಲಿಂಗ ಕವಳಿಕಟ್ಟಿ ಅವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಆಡಳಿತದ ಜೊತೆಗೆ ಇದೀಗ ಮೈಸೂರು ಪೇಪರ್ ಮಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಹೊಣೆಯನ್ನೂ ನಿರ್ವಹಿಸಲಿದ್ದಾರೆ.
ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅದರ ಪುನರುಜ್ಜೀವನಕ್ಕೆ ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾತ್ಮಕ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಈ ಹೆಚ್ಚುವರಿ ಜವಾಬ್ದಾರಿ ನೀಡಿರುವುದು ಮಹತ್ವ ಪಡೆದಿದೆ.
Additional responsibility given to Shivamogga Deputy Commissioner Prabhulinga Kavalikatti
