SUDDILIVE || THIRTHAHALLI
ಇನ್‌ಸ್ಟಾಗ್ರಾಂ ಪರಿಚಯದ ಬಳಿಕ ಯುವತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ; ಮೂವರು ಆರೋಪಿಗಳ ಬಂಧನ-Young woman threatened and sexually assaulted after being introduced to her on Instagram; Three accused arrested
ಶಿವಮೊಗ್ಗ: ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಬೆಳೆಸಿಕೊಂಡು, ಯುವತಿಯ ಫೋಟೋವನ್ನು ಅಸಭ್ಯವಾಗಿ ಎಡಿಟ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸೇರಿದಂತೆ, ಕಿರುಕುಳ ಹಾಗೂ ಹಿಂಬಾಲಿಸಿದ ಪ್ರಕರಣದಲ್ಲಿ ತೀರ್ಥಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, 19 ವರ್ಷದ ಯುವತಿ ಶರಾವತಿ ಪ್ರಥಮ ದರ್ಜೆ ಕಾಲೇಜು, ಕೋಣಂದೂರಿನಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಸುಮಾರು ಮೂರು ತಿಂಗಳ ಹಿಂದೆ ಮೊದಲನೇ ಆರೋಪಿ ಆಸಿಫ್ ಇನ್‌ಸ್ಟಾಗ್ರಾಂ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ.
ದೂರುದಾರರ ಹೇಳಿಕೆಯಂತೆ, ಮೇ 7, 2026ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಕಾರಿನಲ್ಲಿ ಬಂದು ಮಾತನಾಡಬೇಕಿದೆ ಎಂದು ಹೇಳಿ ಯುವತಿಯನ್ನು ತನ್ನ ವಾಹನದಲ್ಲಿ ಕೂರಿಸಿಕೊಂಡು ಹಾಸ್ಟೆಲ್ ಸಮೀಪದ ಅಕೇಶಿಯಾ ಕಾಡಿನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಈ ಹಿಂದೆ ಯುವತಿಯಿಂದ ಪಡೆದಿದ್ದ ಫೋಟೋಗಳನ್ನು ತನ್ನ ಫೋಟೋದೊಂದಿಗೆ ಅಸಭ್ಯವಾಗಿ ಎಡಿಟ್ ಮಾಡಿ, ತನ್ನೊಂದಿಗೆ ಸಹಕರಿಸದಿದ್ದರೆ ಆ ಚಿತ್ರಗಳನ್ನು ಯುವತಿಯ ತಂದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದಾದ ಬಳಿಕವೂ ಹಲವು ಬಾರಿ ಕಾರಿನಲ್ಲಿ ಕರೆದುಕೊಂಡು ಹೋಗಿ ಪ್ಲಾಂಟೇಷನ್ ಪ್ರದೇಶಗಳಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನಿಬ್ಬರು ಆರೋಪಿಗಳಿಂದಲೂ ಕಿರುಕುಳ
ಈ ವಿಚಾರ ತಿಳಿದಿದ್ದ ಆಸಿಫ್ ಜೊತೆ ಕೆಲಸ ಮಾಡುತ್ತಿದ್ದ ಎರಡನೇ ಆರೋಪಿ ಸಾಹಿಲ್, ಯುವತಿಯನ್ನು ಸಂಪರ್ಕಿಸಿ ಮಾತನಾಡಬೇಕಿದೆ ಎಂದು ಕೋಣಂದೂರಿನ ಮಳಲಿಮಠ ರಸ್ತೆಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಅಲ್ಲಿ ಆಸಿಫ್ ಹಾಗೂ ಯುವತಿಯ ವಿಚಾರ ತನಗೆ ಗೊತ್ತಿದೆ ಎಂದು ಹೇಳಿ ಮೈಕೈ ಮುಟ್ಟಲು ಯತ್ನಿಸಿದ್ದು, ಯುವತಿ ಪ್ರತಿರೋಧ ವ್ಯಕ್ತಪಡಿಸಿದಾಗ, ತಾನು ಕರೆದಾಗ ಬರದಿದ್ದರೆ ಈ ವಿಷಯವನ್ನು ಊರಿನವರಿಗೆ ತಿಳಿಸಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಮೂರನೇ ಆರೋಪಿ ಸುಹೇಲ್ ಕೂಡ ಈ ವಿಷಯ ತಿಳಿದು ಯುವತಿಯ ಮೊಬೈಲ್ ಸಂಖ್ಯೆ ಪಡೆದು ಅಸಭ್ಯ ಹಾಗೂ ಅವಾಚ್ಯ ಸಂದೇಶಗಳನ್ನು ಕಳುಹಿಸುತ್ತಿದ್ದನು. ಅಲ್ಲದೆ ಕಾಲೇಜಿಗೆ ಹೋಗುವಾಗ ಹಾಗೂ ಹಿಂದಿರುಗುವಾಗ ಹಿಂಬಾಲಿಸಿಕೊಂಡು ಬಂದು ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಕರಣ ದಾಖಲು, ಮೂವರ ಬಂಧನ
ಯುವತಿಯ ದೂರಿನ ಮೇರೆಗೆ ಕೋಣಂದೂರು ಪೊಲೀಸ್ ಉಪಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್, ಸಾಹಿಲ್ ಹಾಗೂ ಸುಹೇಲ್ ಅವರನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು, ಬೆದರಿಕೆ ಹಾಕುವುದು, ಲೈಂಗಿಕ ದೌರ್ಜನ್ಯ, ಹಿಂಬಾಲಿಸುವುದು, ಅಸಭ್ಯ ಸಂದೇಶ ಕಳುಹಿಸುವುದು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
