SUDDILIVE || SAGARA
ಸಾಗರ ನ್ಯಾಯಾಲಯದಲ್ಲಿ ಹೈ ಅಲರ್ಟ್: ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ-High alert at Sagar Court: Intensive inspection by Bomb Disposal Squad
ಸಾಗರ, ಜು. 4: ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಘಟನೆ ಹಿನ್ನೆಲೆಯಲ್ಲಿ ಸಾಗರ ನ್ಯಾಯಾಲಯ ಸಂಕೀರ್ಣದಲ್ಲಿ ಹೈ ಅಲರ್ಟ್ ಘೋಷಿಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೀವ್ರ ತಪಾಸಣೆ ನಡೆಸಿತು.
ಶಿವಮೊಗ್ಗದ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಸಾಗರ ಉಪವಿಭಾಗದ ಪೊಲೀಸರು ನ್ಯಾಯಾಲಯದ ಆವರಣ, ಕಾರಿಡಾರ್‌ಗಳು, ನ್ಯಾಯಾಧೀಶರ ಕೊಠಡಿಗಳು, ದಾಖಲೆ ಕೊಠಡಿಗಳು ಸೇರಿದಂತೆ ಪ್ರತಿಯೊಂದು ವಿಭಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಟ್ಟುನಿಟ್ಟಿನ ತಪಾಸಣೆಯ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.
ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನೂ ಮೆಟಲ್ ಡಿಟೆಕ್ಟರ್‌ಗಳ ಮೂಲಕ ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡರು.
ಈ ಹಿಂದೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಮಿನಿ ಸಿಲಿಂಡರ್ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಬಳಿಕ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ನಡೆಸಿದ ಸಮಗ್ರ ತಪಾಸಣೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ಅದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತ್ತು.
ಆದರೂ ಯಾವುದೇ ನಿರ್ಲಕ್ಷ್ಯ ವಹಿಸದೆ ಮುಂಜಾಗ್ರತಾ ಕ್ರಮವಾಗಿ ಸಾಗರ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಭದ್ರತಾ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಇ-ಮೇಲ್‌ನ ಮೂಲ ಪತ್ತೆ ಹಾಗೂ ಆರೋಪಿಗಳ ಬಂಧನಕ್ಕಾಗಿ ಸೈಬರ್ ಕ್ರೈಮ್ ಮತ್ತು ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
