SUDDILIVE || SHIVAMOGGA
ಜಮೀನಿನಲ್ಲಿ ಕಾರು ಸ್ಟಾರ್ಟ್ ಮಾಡುವಾಗ ಬೆಂಕಿ; ರೈತನಿಗೆ ಸುಟ್ಟ ಗಾಯ- One injured in face after suspect uses lighter while riding in Omni
ಭದ್ರಾವತಿಯ ನಿವಾಸಿಯೊಬ್ಬರು ಶಿವಮೊಗ್ಗದ ಗೋಂದಿ ಚಟ್ನಹಳ್ಳಿ ಗ್ರಾಮದಲ್ಲಿನ ಜಮೀನಿಗೆ ಕಾರ್ಮಿಕರನ್ನ ಕರೆದುಕೊಂಡು ಬಂದು ವಾಪಾಸ್ ಕರೆದುಕೊಂಡು ಹೋಗಲು ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮುಖ, ಕೈಗಳಿಗೆ ಸುಟ್ಟ ಗಾಯಗಳಾದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ನವಿಲಪ್ಪ ಅವರು ಗೋಂಧಿ ಚಟ್ನಹಳ್ಳಿಯಲ್ಲಿ ಮೂರು ಎಕರೆ ಅಡಿಕೆ ತೋಟದಲ್ಲಿ ಕೆಲಸ ಮಾಡಿಸಲು ಕೂಲಿ ಕಾರ್ಮಿಕರನ್ನು ಕೆ-14 ಎಂಬಿ-4183 ಸಂಖ್ಯೆಯ ಕಾರಿನಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಜಮೀನಿಗೆ ಕರೆದುಕೊಂಡು ಹೋಗಿದ್ದರು. ಕೆಲಸ ಮುಗಿದ ಬಳಿಕ ಬೆಳಿಗ್ಗೆ ಸುಮಾರು 6.15ಕ್ಕೆ ಕಾರು ಸ್ಟಾರ್ಟ್ ಮಾಡಲು ಮುಂದಾದ ವೇಳೆ ಏಕಾಏಕಿ ಬೆಂಕಿಯ ಕಿಡಿ ಹೊತ್ತಿಕೊಂಡಿದೆ.
ಕಾರಿನ ಚಾಲಕರ ಎಡಭಾಗದ ಸೀಟಿನ ಬಳಿ ಮನೆಯ ಬಳಕೆಗೆ ಇಡಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದ್ದು, ಜ್ವಾಲೆ ನವಿಲಪ್ಪ ಅವರ ಎರಡೂ ಕೈಗಳು ಹಾಗೂ ಮುಖಕ್ಕೆ ತಗುಲಿ ಸುಟ್ಟ ಗಾಯಗಳಾಗಿವೆ.
ತಕ್ಷಣ ಕಾರಿನಿಂದ ಹೊರಬಂದು ಅಪಾಯದಿಂದ ಪಾರಾದ ನವಿಲಪ್ಪ ಅವರನ್ನು ಚಿಕಿತ್ಸೆಗಾಗಿ ಮೊದಲು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅಗತ್ಯ ತಜ್ಞ ವೈದ್ಯರು ಲಭ್ಯವಿಲ್ಲದ ಕಾರಣ ಅವರನ್ನು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿಲ್ಲ. ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
