SUDDILIVE || THIRTHAHALLI
ಮೂವರನ್ನ ಬಲಿಪಡೆದ ಗುಡ್ಡಕುಸಿತದ ಪ್ರಕರಣದಲ್ಲಿ ಮಾಲೀಕ ರಮೇಶ್ ಗೌಡ ವಿರುದ್ಧ ಎಫ್‌ಐಆರ್- FIR against owner in landslide that killed three
![]() |
| ಗುಡ್ಡಕುಸಿತದಲ್ಲಿ ದುರ್ಮರಣ ಹೊಂದಿದ ದಂಪತಿಗಳು |
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದ ಇಂದಿರಾನಗರ ಬಡಾವಣೆಯಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರನ್ನು ಇಲ್ಲಿ ವಾಸಕ್ಕೆ ಕರೆತಂದಿದ್ದ ಮಾಲೀಕ ರಮೇಶ್ ಗೌಡ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಿರಂತರ ಮಳೆಯ ಅಬ್ಬರದಿಂದ ಭಾನುವಾರ ಮುಂಜಾನೆ ಸುಮಾರು 2.30 ಗಂಟೆ ವೇಳೆಗೆ ಗುಡ್ಡದ ಮಣ್ಣು ಹಾಗೂ ತಡೆಗೋಡೆ ಏಕಾಏಕಿ ಜರಿದು ಕೆಳಭಾಗದಲ್ಲಿದ್ದ ಶೆಡ್‌ಗಳ ಮೇಲೆ ಬಿದ್ದಿದೆ. ಈ ವೇಳೆ ಶೆಡ್‌ನಲ್ಲಿ ಮಲಗಿದ್ದ ಒಂದೇ ಕುಟುಂಬದ ಸದಸ್ಯರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗಾರು ಗ್ರಾಮದ ಮಲ್ಲಿಕಾರ್ಜುನ (35), ಪತ್ನಿ ನಾಗವೇಣಿ (28) ಹಾಗೂ ಪುತ್ರ ಸಂತೋಷ್ (3) ಎಂದು ಗುರುತಿಸಲಾಗಿದೆ. ಅದೇ ಪಕ್ಕದ ಶೆಡ್‌ನಲ್ಲಿ ವಾಸವಿದ್ದ ಹನುಮಂತ (31) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐದು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬೆಳಗ್ಗೆ ಸುಮಾರು 5.30 ಗಂಟೆಗೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 1 ಗಂಟೆಯವರೆಗೆ ಮುಂದುವರಿದಿದ್ದು, ಮಣ್ಣಿನಡಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಹೊರತೆಗೆಯಲಾಯಿತು. ಬಳಿಕ ಮೃತದೇಹಗಳನ್ನು ತೀರ್ಥಹಳ್ಳಿ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
40ಕ್ಕೂ ಹೆಚ್ಚು ವಲಸೆ ಕುಟುಂಬಗಳ ವಾಸ
ಗಾಂಧಿನಗರ ವಾರ್ಡ್ ವ್ಯಾಪ್ತಿಯ ಇಂದಿರಾನಗರ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ವಿವಿಧ ಜಿಲ್ಲೆಗಳಿಂದ ವಲಸೆ ಬಂದಿರುವ 40ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿವೆ. ಮೃತರು ಸೇರಿದಂತೆ ಹಲವರು ಬಂಡೆ ಲೋಡರ್ಸ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಘಟನಾ ಸ್ಥಳದ ಸುತ್ತಮುತ್ತ ಹೊಸಪೇಟೆಯ 15 ಹಾಗೂ ದಾವಣಗೆರೆಯ 5 ಕುಟುಂಬಗಳು ವಾಸವಾಗಿದ್ದವು ಎಂದು ತಿಳಿದುಬಂದಿದೆ.
ತಡೆಗೋಡೆ ಕುಸಿದು ಸಂಭವಿಸಿದ ದುರಂತ
ಗುಡ್ಡ ಕುಸಿತ ತಡೆಯುವ ಉದ್ದೇಶದಿಂದ ಈ ಪ್ರದೇಶದಲ್ಲಿ ಸುಮಾರು 60 ಅಡಿ ಉದ್ದದ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ತಡೆಗೋಡೆ ಕುಸಿದು ಮಣ್ಣು ಜರಿದು ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
17 ಮಂದಿಯ ಸ್ಥಳಾಂತರ
ಘಟನೆ ಬಳಿಕ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತ್ ತಕ್ಷಣ ಕಾರ್ಯಪ್ರವೃತ್ತರಾಗಿ ಅಪಾಯದ ಪ್ರದೇಶದಲ್ಲಿದ್ದ 17 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಮುಂದಿನ ದಿನಗಳಲ್ಲಿಯೂ ಮಳೆಯ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಎಫ್‌ಐಆರ್ ದಾಖಲು
ಈ ದುರ್ಘಟನೆಗೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕರನ್ನು ಸ್ಥಳದಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿದ್ದ ಮಾಲೀಕ ರಮೇಶ್ ಗೌಡ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಳಿಗೆ ನಿರ್ಮಿಸಲು ಯಾವುದೇ ಪರವಾನಗಿ ಪಡೆಯದೆ ನಿರ್ಮಾಣಕ್ಕೆ ಈ ರಮೇಶ್ ಗೌಡ ಮುಂದಾಗಿದ್ದರಿಂದ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
FIR against owner in landslide that killed three

