SUDDILIVE || SHIVAMOGGA
ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ 12 ವರ್ಷದ ಬಾಲಕ ಹೊಂಡಕ್ಕೆ ಬಿದ್ದು ದುರ್ಮರಣ-12-year-old boy dies after falling into a pit while taking cattle to drink water.
ಸಾಗರ: ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ 12 ವರ್ಷದ ಬಾಲಕನೋರ್ವ ಆಕಸ್ಮಿಕವಾಗಿ ಕಾಲುಜಾರಿ ಆಳವಾದ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಡಗಳಲೆ ಗ್ರಾಮದಲ್ಲಿ ನಡೆದಿದೆ.
ಕನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಗಳಲೆ ಗ್ರಾಮದ ನಿವಾಸಿ ಪರಮೇಶ್ವರ್ ಅವರ 12 ವರ್ಷದ ಪುತ್ರ ಮೃತ ಬಾಲಕ. ಪ್ರಾಣಿಗಳೆಂದರೆ ಬಾಲಕನಿಗೆ ಅಪಾರ ಪ್ರೀತಿ ಎನ್ನಲಾಗಿದ್ದು, ಮನೆಯಲ್ಲೇ ಜಾನುವಾರುಗಳಿಲ್ಲದಿದ್ದರೂ ನೆರೆಹೊರೆಯವರ ದನಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು.
ಶನಿವಾರವೂ ಎಂದಿನಂತೆ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ಬಾಲಕ
ಶನಿವಾರ ಪಕ್ಕದ ಮನೆಯ ಜಾನುವಾರುಗಳನ್ನು ನೀರು ಕುಡಿಸಲು ಗ್ರಾಮದ ನೀರಿನ ಹೊಂಡದ ಬಳಿ ಬಾಲಕ ತೆರಳಿದ್ದನು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಆಳವಾದ ನೀರಿನ ಹೊಂಡಕ್ಕೆ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಗಮನಿಸಿದ ಸ್ಥಳೀಯ ಯುವಕರಾದ ರಾಮಮೂರ್ತಿ ಹಾಗೂ ವಿಕಾಸ್ ತಕ್ಷಣ ಹೊಂಡಕ್ಕೆ ಧುಮುಕಿ ಬಾಲಕನನ್ನು ಹೊರತೆಗೆದಿದ್ದಾರೆ.
ಬಳಿಕ ಕೂಡಲೇ ಬಾಲಕನನ್ನು ಸಾಗರ ನಗರದ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು, ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಯುವಕರ ಸಮಯಪ್ರಜ್ಞೆಗೆ ಮೆಚ್ಚುಗೆ
ಬಾಲಕ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಕ್ಷಣ ಯಾವುದೇ ವಿಳಂಬ ಮಾಡದೆ ಹೊಂಡಕ್ಕೆ ಧುಮುಕಿ ರಕ್ಷಣೆಗೆ ಮುಂದಾದ ರಾಮಮೂರ್ತಿ ಹಾಗೂ ವಿಕಾಸ್ ಅವರ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 12 ವರ್ಷದ ಬಾಲಕನ ದುರಂತ ಸಾವಿನಿಂದ ಮಂಡಗಳಲೆ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
