ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ: 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ- Forest officials raid Rippanpete: 21 kg of deer meat seized, accused abscond

 SUDDILIVE || RIPPONPETE

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ: 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ- Forest officials raid Rippanpete: 21 kg of deer meat seized, accused abscond  
Forest, ripponpete

Forest, ripponpete

ರಿಪ್ಪನ್‌ಪೇಟೆ: ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿ ಸಂಗ್ರಹಿಸಿಡಲಾಗಿತ್ತು ಎನ್ನಲಾದ ಸುಮಾರು 21 ಕೆ.ಜಿ. ಜಿಂಕೆ ಮಾಂಸವನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಶಬರೀಶ ನಗರದಲ್ಲಿ ನಡೆದಿದೆ.

ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಶಬರೀಶ ನಗರದಲ್ಲಿ ದಾಳಿ ನಡೆಸಿದ್ದು, ಈ ವೇಳೆ ಮಾರುತಿ ಎರ್ಟಿಗಾ ಕಾರಿನಲ್ಲಿ ಸಂಗ್ರಹಿಸಿಡಲಾಗಿದ್ದ ಜಿಂಕೆ ಮಾಂಸ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅಧಿಕಾರಿಗಳು ಕಾರನ್ನು ಪರಿಶೀಲಿಸಿದಾಗ ಸುಮಾರು 21 ಕೆ.ಜಿ. ಜಿಂಕೆ ಮಾಂಸ ಪತ್ತೆಯಾಗಿದ್ದು, ಮಾಂಸದೊಂದಿಗೆ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಮಾರುತಿ ಎರ್ಟಿಗಾ ಕಾರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.

ದಾಳಿ ವೇಳೆ ಆರೋಪಿಗಳ ಪರಾರಿ

ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಶಬರೀಶ ನಗರ ನಿವಾಸಿ ಗುರುರಾಜ್, ಕಾರಗೋಡು ನಿವಾಸಿ ಹಾಗೂ ಹೊಸನಗರ ತಾಲೂಕು ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಂದು ಗುರುತಿಸಲ್ಪಟ್ಟಿರುವ ಗಣೇಶ್ ಕೆ.ಜಿ. ಸೇರಿದಂತೆ ಇತರರು ಪರಾರಿಯಾಗಿದ್ದಾರೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಜಿಂಕೆ ಮಾಂಸವನ್ನು ಎಲ್ಲಿಂದ ತರಲಾಗಿತ್ತು, ಬೇಟೆಯಾಡಲಾಗಿತ್ತೇ ಅಥವಾ ಬೇರೆಡೆಯಿಂದ ಖರೀದಿಸಿ ಮಾರಾಟಕ್ಕೆ ಸಂಗ್ರಹಿಸಲಾಗಿತ್ತೇ ಎಂಬುದರ ಕುರಿತು ಅರಣ್ಯಾಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ

ಜಿಂಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವುದರಿಂದ, ಜಿಂಕೆ ಮಾಂಸವನ್ನು ಅಕ್ರಮವಾಗಿ ಹೊಂದಿರುವುದು ಹಾಗೂ ಮಾರಾಟಕ್ಕೆ ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಜಿಂಕೆ ಬೇಟೆಯ ಹಿಂದೆ ಯಾವುದೇ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ

ಅರಣ್ಯ ಸಂಚಾರಿ ದಳದ ಗಣೇಶ್ ಬಿ.ಸಿ., ಆಂಜನೇಯ ಪಾಟೀಲ್, ಚಂದ್ರಕಾಂತ್, ಸುರೇಶ್, ಪ್ರಮೋದಿನಿ ಹಾಗೂ ಹೆಚ್.ಬಿ. ದೊಡ್ಡಮನಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಶಪಡಿಸಿಕೊಂಡಿರುವ ಜಿಂಕೆ ಮಾಂಸ ಹಾಗೂ ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅಧಿಕಾರಿಗಳು ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.

Forest officials raid Rippanpete: 21 kg of deer meat seized, accused abscond  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close