ಮಧು ಬಂಗಾರಪ್ಪ ಭಾಷೆ ನಿಯಂತ್ರಿಸಲಿ: ಸಿದ್ರಾಮಣ್ಣ- Madhu Bangarappa should watch his language: Sidramanna

 SUDDILIVE || SHIVAMOGGA

ಮಧು ಬಂಗಾರಪ್ಪ ಭಾಷೆ ನಿಯಂತ್ರಿಸಲಿ: ಸಿದ್ರಾಮಣ್ಣ- Madhu Bangarappa should watch his language: Sidramanna   
Madhu, bangarappa

ಶಿವಮೊಗ್ಗ: ಶರಾವತಿ ಸಂತ್ರಸ್ತರು ಹಾಗೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸಚಿವ ಮಧು ಬಂಗಾರಪ್ಪ ಅವರು ನೀಡಿರುವ ಹೇಳಿಕೆಗಳಿಗೆ ಬಿಜೆಪಿ ಮುಖಂಡ ಸಿದ್ರಾಮಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಧು ಬಂಗಾರಪ್ಪನವರು ಬಳಸಿರುವ ಭಾಷೆ ಶಿವಮೊಗ್ಗ ಜಿಲ್ಲೆಯ ರಾಜಕಾರಣಕ್ಕೆ ಗೌರವ ತರುವಂತಹದ್ದಲ್ಲ. ಅವರಿಗೆ ಮಾತನಾಡುವ ಸ್ವಾತಂತ್ರ್ಯ ಇರುವಂತೆಯೇ ವಿರೋಧ ಪಕ್ಷಕ್ಕೂ ಮಾತನಾಡುವ ಸ್ವಾತಂತ್ರ್ಯವಿದೆ. ದಯಮಾಡಿ ಅವರು ತಮ್ಮ ಭಾಷೆಯನ್ನು ತಿದ್ದುಕೊಳ್ಳಬೇಕು” ಎಂದು ಹೇಳಿದರು.

“ಏನು ಬಂದಿದೆಯೋ ರೋಗ, ಅವರಪ್ಪ–ಇವರಪ್ಪ ಎಂದು ಮಾತನಾಡುವ ಅಗತ್ಯವೇನು? ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ಆದರೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ” ಎಂದು ಸಿದ್ರಾಮಣ್ಣ ಆಕ್ಷೇಪಿಸಿದರು.

‘ನೀವು ಮಧು ಬಂಗಾರಪ್ಪ, ಬಂಗಾರಪ್ಪ ಅಲ್ಲ’

ಮಧು ಬಂಗಾರಪ್ಪ ಅವರು ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರಿನ ಪ್ರಭಾವದಿಂದ ಹೊರಬಂದು ತಮ್ಮದೇ ರಾಜಕೀಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಸಿದ್ರಾಮಣ್ಣ ಹೇಳಿದರು.

“ನೀವು ಮಧು ಬಂಗಾರಪ್ಪ ಅಷ್ಟೇ, ಬಂಗಾರಪ್ಪ ಅಲ್ಲ. ಬಂಗಾರಪ್ಪ ಆಗಬೇಕಾದರೆ ಒಂದೇ ದಿನದಲ್ಲಿ ಆಗುವುದಿಲ್ಲ. 1967ರಿಂದ 2000ರ ದಶಕದವರೆಗೂ ಜನರೊಂದಿಗೆ ಕೆಲಸ ಮಾಡಿ ಅವರು ಬಂಗಾರಪ್ಪ ಆದವರು” ಎಂದು ಹೇಳಿದರು.

ಎಸ್. ಬಂಗಾರಪ್ಪ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಬಡವರು ಹಾಗೂ ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ್ದ ಅವರು ಮುಖ್ಯಮಂತ್ರಿಯಾಗಿದ್ದರು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದ ಸಂದರ್ಭದಲ್ಲೂ ಅವರಿಗೆ ಗೌರವ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧು ಬಂಗಾರಪ್ಪ ಅವರನ್ನು ಸಚಿವರನ್ನಾಗಿ ಮಾಡಿರುವ ಬಗ್ಗೆ ಇತ್ತೀಚೆಗೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಸಿದ್ರಾಮಣ್ಣ, “ಬಂಗಾರಪ್ಪನವರು ಹಿಂದೆ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಆ ಋಣ ತೀರಿಸಲು ಮಧು ಬಂಗಾರಪ್ಪ ಅವರನ್ನು ಸಚಿವರನ್ನಾಗಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮಧು ಬಂಗಾರಪ್ಪ ಅವರು ತಮ್ಮ ಹೋರಾಟ ಅಥವಾ ಸಾಧನೆಯಿಂದ ಸಚಿವರಾಗಿಲ್ಲ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ” ಎಂದು ಟೀಕಿಸಿದರು.

ಕಸ್ತೂರಿ ರಂಗನ್ ವರದಿ ಪಕ್ಷ ರಾಜಕಾರಣವಾಗಬಾರದು

ಕಸ್ತೂರಿ ರಂಗನ್ ವರದಿ ವಿಚಾರವನ್ನು ಪಕ್ಷ ರಾಜಕಾರಣಕ್ಕೆ ಬಳಸಬಾರದು ಎಂದು ಸಿದ್ರಾಮಣ್ಣ ಹೇಳಿದರು.

“ಕಸ್ತೂರಿ ರಂಗನ್ ವರದಿಯ ಗಂಭೀರತೆ ಮತ್ತು ಅದರ ಪರಿಣಾಮವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಕೂಗೆಬ್ಬಿಸುವುದು ಅಥವಾ ರಾಜ್ಯ ಸರ್ಕಾರದ ಪರವಾಗಿ ರಾಜಕೀಯ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಪಕ್ಷದ ವಿಚಾರವಲ್ಲ; ಪರಿಸರಕ್ಕೆ ಸಂಬಂಧಿಸಿದ ವಿಚಾರ” ಎಂದರು.

ಪಶ್ಚಿಮ ಘಟ್ಟ ಸಂರಕ್ಷಣೆಯಾಗಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ವರದಿಯಿಂದ ಜನರು, ರೈತರು ಹಾಗೂ ಗ್ರಾಮಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಸಮಗ್ರವಾಗಿ ಚರ್ಚಿಸಬೇಕು ಎಂದು ಹೇಳಿದರು.

ಮೂರು ಜಿಲ್ಲೆಗಳಿಗೆ ಹೆಚ್ಚಿನ ಪರಿಣಾಮ

ಕಸ್ತೂರಿ ರಂಗನ್ ವರದಿಯಡಿ ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಾಗಿ ಹಲವು ಗ್ರಾಮಗಳನ್ನು ಗುರುತಿಸಲಾಗಿದೆ. ಗುಜರಾತ್, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಈ ವ್ಯಾಪ್ತಿಯಲ್ಲಿವೆ ಎಂದು ಸಿದ್ರಾಮಣ್ಣ ವಿವರಿಸಿದರು.

ಕರ್ನಾಟಕದಲ್ಲಿ ಒಟ್ಟು 1,576 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೇ 1,257 ಗ್ರಾಮಗಳು ಬರುತ್ತವೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ 484, ಉತ್ತರ ಕನ್ನಡದಲ್ಲಿ 626 ಹಾಗೂ ಚಿಕ್ಕಮಗಳೂರಿನಲ್ಲಿ 147 ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ. ಹೀಗಾಗಿ ವರದಿಯ ನೇರ ಪರಿಣಾಮ ಈ ಮೂರು ಜಿಲ್ಲೆಗಳ ಮೇಲೆ ಹೆಚ್ಚಾಗಿ ಬೀಳುವ ಸಾಧ್ಯತೆ ಇರುವುದರಿಂದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಒತ್ತಾಯಿಸಿದರು.

ಸಂಸದರ ಸಭೆಯಲ್ಲಿ ಪಕ್ಷಾತೀತ ನಿರ್ಧಾರ

ಇದೇ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳ ಸಂಸತ್ ಸದಸ್ಯರನ್ನು ಶಿವಮೊಗ್ಗಕ್ಕೆ ಕರೆಸಿ ಚರ್ಚೆ ನಡೆಸಲಾಗಿದೆ. ಆ.28ರಂದು ಸುಮಾರು ಮೂರು ಗಂಟೆಗಳ ಕಾಲ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ, ಕಸ್ತೂರಿ ರಂಗನ್ ವರದಿಯ ವಿಚಾರವನ್ನು ಯಾವುದೇ ಕಾರಣಕ್ಕೂ ಪಕ್ಷ ರಾಜಕಾರಣಕ್ಕೆ ಒಳಪಡಿಸಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿದ್ರಾಮಣ್ಣ ತಿಳಿಸಿದರು.

ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರದಲ್ಲಿ ನಡೆದ ಹೋರಾಟಗಳಲ್ಲಿ ಪಕ್ಷಭೇದವಿಲ್ಲದೆ ಬೆಂಬಲ ನೀಡಲಾಗಿದೆ. ವಿಷಯದ ಆಧಾರದ ಮೇಲೆ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದಾರೆ ಎಂದರು.

“ಮಧು ಬಂಗಾರಪ್ಪನವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಪಕ್ಷ ರಾಜಕಾರಣದ ಮಾತುಗಳನ್ನು ನಿಲ್ಲಿಸಿ, ಭಾಷೆಯ ಮೇಲೆ ಸಂಪೂರ್ಣ ನಿಯಂತ್ರಣ ಇಟ್ಟುಕೊಳ್ಳಬೇಕು. ಇದು ಅತ್ಯಂತ ಗಂಭೀರವಾದ ಸಮಸ್ಯೆ. ಕೇವಲ ಬಿಜೆಪಿಯವರದ್ದಾಗಲಿ, ಸಂಸದರದ್ದಾಗಲಿ ಅಲ್ಲ; ಎಲ್ಲರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.

ಗಾಡ್ಗೀಳ್ ವರದಿ ಹಿನ್ನೆಲೆಯೂ ಚರ್ಚಿಸಬೇಕು

ಗಾಡ್ಗೀಳ್ ವರದಿ 2010-11ರ ಅವಧಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಬಂದಿತ್ತು. ಆಗ ಅರಣ್ಯ ಮತ್ತು ಪರಿಸರ ಸಚಿವರಾಗಿದ್ದವರು ಜೈರಾಮ್ ರಮೇಶ್. ನಂತರ 2013ರಲ್ಲಿ ಕಸ್ತೂರಿ ರಂಗನ್ ವರದಿ ಬಂದಾಗಲೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು ಮತ್ತು ಅರಣ್ಯ ಹಾಗೂ ಪರಿಸರ ಸಚಿವರಾಗಿದ್ದ ಜಯಂತಿ ನಟರಾಜನ್ ಅವರು ಕಾಂಗ್ರೆಸ್‌ನವರಾಗಿದ್ದರು ಎಂದು ಸಿದ್ರಾಮಣ್ಣ ವಿವರಿಸಿದರು.

“ಹೀಗಾಗಿ ಇದು ಕಾಂಗ್ರೆಸ್ ವರದಿ, ಬಿಜೆಪಿ ವರದಿ ಎಂದು ನೋಡುವ ಅಗತ್ಯವಿಲ್ಲ. ವರದಿ ಪರಿಸರಕ್ಕೆ ಸಂಬಂಧಿಸಿದದ್ದು. ಪಶ್ಚಿಮ ಘಟ್ಟ ಉಳಿಯಬೇಕು, ಪರಿಸರಕ್ಕೆ ಹಾನಿಯಾಗಬಾರದು ಎಂಬುದರಲ್ಲಿ ನಮ್ಮ ಸಹಮತವಿದೆ. ಆದರೆ ಪರಿಸರ ಸಂರಕ್ಷಣೆಯ ಜೊತೆಗೆ ಅಲ್ಲಿನ ಜನರ ಬದುಕು ಮತ್ತು ಹಕ್ಕುಗಳನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮಾಜಿ ಶಾಸಕ ಕುಮಾರಸ್ವಾಮಿ, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಶಿವರಾಜ್, ಮಾಲ್ತೇಶ್ ಹಾಗೂ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್, ಮಂಜುನಾಥ್ ಉಪಸ್ಥಿತರಿದ್ದರು.

Madhu Bangarappa should watch his language: Sidramanna   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close