ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಚುಡಾಯಿಸಿದ ಆರೋಪ: ಪಿಯು ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ- Allegation of harassing high school girls: Students protest in front of PU college

SUDDILIVE || SHIVAMOGGA

ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಚುಡಾಯಿಸಿದ ಆರೋಪ: ಪಿಯು ಕಾಲೇಜು ಎದುರು ವಿದ್ಯಾರ್ಥಿಗಳ ಪ್ರತಿಭಟನೆ- Allegation of harassing high school girls: Students protest in front of PU college 

Kallihal, student

ಪೊಲೀಸರ ಮಧ್ಯಪ್ರವೇಶ; ವಿದ್ಯಾರ್ಥಿಗಳಿಗೆ ಎಚ್ಚರಿಕೆ, ಕಾಲೇಜು ಆಡಳಿತದ ವಿರುದ್ಧವೂ ಅಸಮಾಧಾನ

ಭದ್ರಾವತಿ-ಸಮೀಪದ ಕಲ್ಲಿಹಾಳ್ ಗ್ರಾಮದ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ ಎಂದು ಆರೋಪಿಸಿ, ಪ್ರೌಢಶಾಲೆಯ ವಿದ್ಯಾರ್ಥಿಗಳು ಮಂಗಳವಾರ ಪಿಯು ಕಾಲೇಜಿನ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲಿಹಾಳ್ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಗಳು ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಕರೆದಾಡುವುದು, ಅಸಭ್ಯವಾಗಿ ವರ್ತಿಸುವುದು ಹಾಗೂ ಪ್ರೌಢಶಾಲೆಯಲ್ಲಿ ನಡೆಯುವ ದೈನಂದಿನ ಪ್ರಾರ್ಥನೆಗೆ ಅಡ್ಡಿಪಡಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಹೈಸ್ಕೂಲ್ ವಿದ್ಯಾರ್ಥಿಗಳು ಆರೋಪಿಸಿದರು.

ಮಂಗಳವಾರ ಬೆಳಗ್ಗೆ ಪ್ರೌಢಶಾಲೆಯಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಾ ವಿಭಾಗದ ಕೆಲ ವಿದ್ಯಾರ್ಥಿಗಳು ಹೈಸ್ಕೂಲ್ ವಿದ್ಯಾರ್ಥಿಗಳತ್ತ ಚಪ್ಪಲಿ ಎಸೆದಿದ್ದಾರೆ ಎನ್ನಲಾದ ಘಟನೆ ನಡೆದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಿಯು ಕಾಲೇಜಿನ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಅಸಭ್ಯವಾಗಿ ವರ್ತಿಸುತ್ತಿರುವ ವಿದ್ಯಾರ್ಥಿಗಳನ್ನು ಕೂಡಲೇ ಕಾಲೇಜಿನಿಂದ ವಜಾಗೊಳಿಸಬೇಕು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪೊಲೀಸರ ಮಧ್ಯಪ್ರವೇಶ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಪೊಲೀಸರು ಪ್ರತಿಭಟನಾನಿರತ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ತರಗತಿಗಳಿಗೆ ಕಳುಹಿಸಿದರು.

ನಂತರ ಪಿಯು ಕಾಲೇಜು ಕಟ್ಟಡದಲ್ಲಿ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ಪೊಲೀಸರು, ಹೈಸ್ಕೂಲ್ ವಿಭಾಗದ ಕಡೆಗೆ ಯಾವುದೇ ಕಾರಣಕ್ಕೂ ತೆರಳಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರ ಎದುರು ಅಂಗಿ ಬದಲಾಯಿಸುವುದು, ವಿನಾಕಾರಣ ಕಾರಿಡಾರ್‌ಗಳಲ್ಲಿ ಸುತ್ತಾಡುವುದು ಹಾಗೂ ಇತರರಿಗೆ ತೊಂದರೆ ನೀಡುವಂತಹ ವರ್ತನೆಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದರು.

ರ‍್ಯಾಗಿಂಗ್ ಅಥವಾ ಇತರ ಅಸಭ್ಯ ಚಟುವಟಿಕೆಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡುಬಂದರೆ, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ಅಂತಹವರನ್ನು ರೌಡಿ ಪಟ್ಟಿಗೆ ಸೇರಿಸುವಂತಹ ಕಠಿಣ ಕ್ರಮಕ್ಕೂ ಮುಂದಾಗಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದರು.

ಉಪನ್ಯಾಸಕರ ಅಸಹಾಯಕತೆ

ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳ ದುರ್ವರ್ತನೆ ಕುರಿತು ಹೈಸ್ಕೂಲ್ ವಿಭಾಗದ ಸಿಬ್ಬಂದಿ ಹಲವು ಬಾರಿ ಉಪನ್ಯಾಸಕರ ಗಮನಕ್ಕೆ ತಂದಿದ್ದರೂ, ನಿರೀಕ್ಷಿತ ಫಲಿತಾಂಶ ದೊರಕಿಲ್ಲ ಎಂದು ಹೇಳಲಾಗಿದೆ. ಇದೇ ಚುಡಾಯನೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಒಬ್ಬ ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ ಅತಿಥಿ ಶಿಕ್ಷಕ ಸಂತೋಷ ಅವರ ಮೇಲೆ ಕಾಲೇಜಿನ ಎಸ್‌ಡಿಸಿ ಉಪಾಧ್ಯಕ್ಷ ಪುರುಷೋತ್ತಮ ಹಲ್ಲೆಗೆ ಮುಂದಾದರು ಎಂಬ ಆರೋಪವೂ ಕೇಳಿಬಂದಿದೆ.

ಈ ಘಟನೆಯ ಬಳಿಕ ಕಾಲೇಜಿನ ಕೆಲ ವಿದ್ಯಾರ್ಥಿಗಳು ಉಪನ್ಯಾಸಕರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಾಲೇಜು ಆವರಣದಲ್ಲಿಯೇ ಉಪನ್ಯಾಸಕರ ಎದುರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಲು ಮುಂದಾದರೆ ತಮ್ಮ ಮೇಲೆಯೇ ತಿರುಗಿಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಿಯು ಕಾಲೇಜಿನ ಉಪನ್ಯಾಸಕರು ಪೊಲೀಸರಿಗೆ ತಮ್ಮ ಅಸಹಾಯಕತೆಯನ್ನು ತಿಳಿಸಿದ್ದಾರೆ ಎನ್ನಲಾಗಿದೆ.

ಆಡಳಿತದ ವಿರುದ್ಧವೂ ಅಸಮಾಧಾನ

ಘಟನೆಯ ನಂತರ ಕಾಲೇಜಿಗೆ ಭೇಟಿ ನೀಡಿದ ಎಸ್‌ಡಿಸಿ ಉಪಾಧ್ಯಕ್ಷ ಪುರುಷೋತ್ತಮ ಅವರು ಕಾಲೇಜಿನ ಪ್ರಾಚಾರ್ಯರನ್ನು ಘಟನೆ ಕುರಿತು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೆಲ ಉಪನ್ಯಾಸಕರು ಎಸ್‌ಡಿಸಿ ಉಪಾಧ್ಯಕ್ಷರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. “ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ ಉಪನ್ಯಾಸಕರ ಮೇಲೆಯೇ ಹಲ್ಲೆಗೆ ಮುಂದಾದರೆ, ವಿದ್ಯಾರ್ಥಿಗಳು ಕೂಡ ಅದನ್ನೇ ಅನುಸರಿಸುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಶಿಸ್ತು ಕಾಪಾಡಲು ಸಾಧ್ಯ?” ಎಂದು ಅವರು ಪ್ರಶ್ನಿಸಿದರು ಎನ್ನಲಾಗಿದೆ.

ಹೈಸ್ಕೂಲ್ ವಿದ್ಯಾರ್ಥಿನಿಯರ ಸುರಕ್ಷತೆ, ಶಾಲಾ ಆವರಣದಲ್ಲಿ ಶೈಕ್ಷಣಿಕ ವಾತಾವರಣ ಮತ್ತು ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡುವ ಕುರಿತು ಶಿಕ್ಷಣ ಇಲಾಖೆ ಹಾಗೂ ಕಾಲೇಜು ಆಡಳಿತವು ತಕ್ಷಣ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರೆಂದು ಕಂಡುಬರುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂಬುದು ಪೋಷಕರು ಮತ್ತು ವಿದ್ಯಾರ್ಥಿಗಳ ಆಗ್ರಹವಾಗಿದೆ.

Allegation of harassing high school girls: Students protest in front of PU college   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close