SUDDILIVE || BHADRAVATHI
ಅಕ್ರಮವಾಗಿ ಕಡವೆ ಬೇಟೆ: 70 ಕೆಜಿ ಮಾಂಸ, ನಾಡ ಬಂದೂಕು ವಶ; ಮೂವರ ಬಂಧನ-Illegal hunting of kangaroos: 70 kg of meat, firearm seized; three arrested
ಭದ್ರಾವತಿ: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ ಸುಮಾರು 70 ಕೆ.ಜಿ. ಕಡವೆ ಮಾಂಸವನ್ನು (ತಲೆ ಮತ್ತು ಕಾಲುಗಳ ಸಮೇತ) ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ, ಹೆಡ್‌ಲ್ಯಾಂಪ್ ಸೇರಿದಂತೆ ವಿವಿಧ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಮಾನತುಗೊಳಿಸಿಕೊಂಡಿದ್ದಾರೆ.
ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್., ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ., ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್., ಎಂ.ಸಿ.ಹಳ್ಳಿ ಗಸ್ತುವಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ., ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಾಚರಣೆಗೆ ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಐಎಫ್‌ಎಸ್ ಹಾಗೂ ತರೀಕೆರೆ ಉಪ ವಿಭಾಗದ ಅಧಿಕಾರಿಗಳ ಮಾರ್ಗದರ್ಶನವಿತ್ತು.
