SUDDILIVE || SHIVAMOGGA
ಅಡಕೆ ಬೇಯಿಸುವ ಹಂಡೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು- A man who was seriously injured after falling into a pot of cooking areca nut hande dies without receiving treatment.
ಶಿವಮೊಗ್ಗ: ಅಡಕೆ ಬೇಯಿಸುವ ವೇಳೆ ಆಕಸ್ಮಿಕವಾಗಿ ಬಿಸಿ ಹಂಡೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಒಡ್ಡಿನಕೊಪ್ಪ ನಿವಾಸಿ ಜೇನು ಕುಮಾರ್ (ವಯಸ್ಸು ಲಭ್ಯವಿಲ್ಲ) ಮೃತಪಟ್ಟ ದುರ್ದೈವಿ.
ಸೆಪ್ಟೆಂಬರ್ 8ರಂದು ಜೇನು ಕುಮಾರ್ ಅವರು ತಮ್ಮ ಅಡಕೆ ಬೇಯಿಸುವ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಡಕೆಯನ್ನು ಬೇಯಿಸಿ ಹೊರತೆಗೆದ ಬಳಿಕ ಹಂಡೆಯಲ್ಲಿದ್ದ ಬಿಸಿ ದ್ರವವನ್ನು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹಂಡೆಯೊಳಗೆ ಬಿದ್ದಿದ್ದಾರೆ.
ಬಿಸಿ ದ್ರವಕ್ಕೆ ಬಿದ್ದ ಪರಿಣಾಮ ಅವರ ದೇಹದ ಬಹುತೇಕ ಭಾಗ ತೀವ್ರವಾಗಿ ಸುಟ್ಟು ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಮಣಿಪಾಲದ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಆದರೆ, ತೀವ್ರವಾಗಿ ಗಾಯಗೊಂಡಿದ್ದ ಜೇನು ಕುಮಾರ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೆಪ್ಟೆಂಬರ್ 16ರಂದು ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
