ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕಾರ್ಯಕ್ರಮದಲ್ಲಿ ಹೈಡ್ರಾಮಾ: ವಂದೇ ಮಾತರಂ ಹಾಡಿಗೆ ಆಗ್ರಹಿಸಿ ಶಾಸಕ ಚನ್ನಬಸಪ್ಪ ವಿರೋಧ-Hydrarama at Kasthuri Rangan's report program in Thirthahalli: MLA Channabasappa opposes, demanding Vande Mataram song

 SUDDILIVE || SHIVAMOGGA

ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕಾರ್ಯಕ್ರಮದಲ್ಲಿ ಹೈಡ್ರಾಮಾ: ವಂದೇ ಮಾತರಂ ಹಾಡಿಗೆ ಆಗ್ರಹಿಸಿ ಶಾಸಕ ಚನ್ನಬಸಪ್ಪ ವಿರೋಧ-Hydrarama at Kasthuri Rangan's report program in Thirthahalli: MLA Channabasappa opposes, demanding Vande Mataram song 




ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ಕುರಿತು ರೈತರೊಂದಿಗೆ ಚರ್ಚಿಸಲು ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನ ಎರಡು ಸಾಲಿನಲ್ಲಿ ಹಾಡಿದ ವಿಚಾರವಾಗಿ ಗೊಂದಲ ಉಂಟಾಗಿ ಕೆಲಕಾಲ ಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

ರೈತರ ಸಮಸ್ಯೆಗಳು ಹಾಗೂ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಹಾಡನ್ನು ಪೂರ್ಣವಾಗಿ ಹಾಡಲು ಅವಕಾಶ ನೀಡದಿರುವುದನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಆಕ್ಷೇಪಿಸಿದರು. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಯಲ್ಲೇ ಮೈಕ್ ಮುಂದೆ ಬಂದ ಶಾಸಕರು, ವಂದೇ ಮಾತರಂ ಹಾಡನ್ನು ಪೂರ್ಣವಾಗಿ ಹಾಡಬೇಕು ಎಂದು ಆಗ್ರಹಿಸಿದರು.

ಶಾಸಕರ ಈ ಆಗ್ರಹದಿಂದ ಕೆಲಕಾಲ ವೇದಿಕೆ ಹಾಗೂ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾರ್ಯಕ್ರಮದ ಉದ್ದೇಶ ಕಸ್ತೂರಿ ರಂಗನ್ ವರದಿ ಕುರಿತು ರೈತರೊಂದಿಗೆ ಚರ್ಚಿಸುವುದಾಗಿದ್ದರೂ, ವಂದೇ ಮಾತರಂ ವಿಚಾರವು ಕಾರ್ಯಕ್ರಮದ ಪ್ರಮುಖ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು.

ವೇದಿಕೆಗೆ ಬಂದ ಹೆಚ್.ಸಿ. ಯೋಗೀಶ್; ಡಿ.ಕೆ. ಶಿವಕುಮಾರ್ ಪರ ಘೋಷಣೆ

ಇದರ ನಡುವೆಯೇ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ವೇದಿಕೆಗೆ ಆಗಮಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಘೋಷಣೆ ಕೂಗಿದರು. ಇದರಿಂದ ವೇದಿಕೆಯ ವಾತಾವರಣ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ, ಶಾಸಕರ ವಂದೇ ಮಾತರಂ ಆಗ್ರಹದ ಬಳಿಕ ಸಭೆಯ ಮುಂಭಾಗದಲ್ಲಿ ಕೆಲಕಾಲ ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು.

ಶಾಸಕರ ವಿರುದ್ಧ ಆಕ್ರೋಶ; ವೇದಿಕೆ ಮುಂಭಾಗದಲ್ಲಿ ಗದ್ದಲ

ಶಾಸಕರು ಮೈಕ್ ಮುಂದೆ ನಿಂತು ವಂದೇ ಮಾತರಂ ಹಾಡಬೇಕು ಎಂದು ಆಗ್ರಹಿಸುತ್ತಿದ್ದ ವೇಳೆ, ವೇದಿಕೆಯ ಮುಂಭಾಗದಲ್ಲಿದ್ದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುಂದೆ ಬಂದು ಶಾಸಕರನ್ನು ಪ್ರಶ್ನಿಸಲು ಹಾಗೂ ಆಕ್ಷೇಪ ವ್ಯಕ್ತಪಡಿಸಲು ಮುಂದಾದರು.

ಪರಸ್ಪರ ಘೋಷಣೆಗಳು ಹಾಗೂ ಆಕ್ಷೇಪ-ಪ್ರತ್ಯಾಕ್ಷೇಪಗಳಿಂದಾಗಿ ಕಾರ್ಯಕ್ರಮದ ವಾತಾವರಣ ಕೆಲಕಾಲ ಗೊಂದಲಮಯವಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಆಯೋಜಕರು ಹಾಗೂ ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಿದರು.

ಕಸ್ತೂರಿ ರಂಗನ್ ವರದಿಯ ಕುರಿತು ರೈತರೊಂದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ, ಪಶ್ಚಿಮ ಘಟ್ಟ ಪ್ರದೇಶದ ರೈತರ ಆತಂಕಗಳು ಹಾಗೂ ವರದಿಯ ಪರಿಣಾಮಗಳ ಕುರಿತು ಚರ್ಚಿಸಬೇಕಿದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ವಿಚಾರ ಮುನ್ನೆಲೆಗೆ ಬಂದಿರುವುದು ಗಮನ ಸೆಳೆಯಿತು.

ಕಾರ್ಯಕ್ರಮದ ವೇಳೆ ನಡೆದ ಈ ಬೆಳವಣಿಗೆಗಳಿಂದಾಗಿ ತೀರ್ಥಹಳ್ಳಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಕೆಲಕಾಲ ರಾಜಕೀಯ ಘೋಷಣೆಗಳು, ಪ್ರತಿಭಟನೆ ಹಾಗೂ ವಾಗ್ವಾದದ ವಾತಾವರಣ ನಿರ್ಮಾಣವಾಗಿತ್ತು. ವಂದೇ ಮಾತರಂ ಹಾಡನ್ನ ಸಂಪೂರ್ಣ ಹಾಡುವಂತೆ ಸಿಎಂ ಗಮನ ಸೆಳೆಯುವಲ್ಲಿ ಶಾಸಕರು ಯಶಸ್ವಿಯಾದರು. 

Hydrarama at Kasthuri Rangan's report program in Thirthahalli: MLA Channabasappa opposes, demanding Vande Mataram song 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close