SUDDILIVE || THIRTHAHALLI
ಪತ್ರಿಕಾ ಸಾಹಿತ್ಯದಲ್ಲಿ ಪದ ಜಿಪುಣತನ ಅವಶ್ಯ-punctuation essential in journalism
ಪತ್ರಿಕಾ ವರದಿಗಾರಿಕೆಯಲ್ಲಿ ಧಾರಾಳವಾಗಿ ಪದ ಪ್ರಯೋಗ ಮಾಡುವುದನ್ನು ನಿಲ್ಲಿಸಬೇಕು. ಒಂದು ಸಭೆ, ಸಮಾರಂಭದ ಸುದ್ದಿ ಬಯಸುವವರು ಪದ ಜಿಪುಣರಾಗಿರಬೇಕು. ಇಲ್ಲದಿದ್ದರೆ ನಿರೀಕ್ಷೆಗಳು ಹುಸಿಯಾಗಬಹುದು ಎಂದು ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಪ್ರತಿಷ್ಠಾನ, ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಸಹಯೋಗದಲ್ಲಿ ಕುಪ್ಪಳಿಯಲ್ಲಿ ನಡೆದ ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರದಲ್ಲಿ ಕನ್ನಡ ಕಾರ್ಯಕ್ರಮ ಸಂಯೋಜನೆ ಮತ್ತು ಮಾದ್ಯಮ ನಿರ್ವಹಣೆ ವಿಷಯದ ಕುರಿತು ಅವರು ಮಾತನಾಡಿದರು.
ವರದಿ ತಯಾರಿಕೆಯ ಆರಂಭದ ಹಂತದಲ್ಲಿ ನಮ್ಮ ಸುದ್ದಿ ಯಾರಿಗೆ, ಎಷ್ಟು ಪ್ರಮಾಣದಲ್ಲಿ ತಲುಪಬೇಕು ಎಂಬ ನಿರ್ಣಯ ಕೈಗೊಳ್ಳಬೇಕು. ತೂಕ ಹೆಚ್ಚಿದಂತೆ ಚಿಕ್ಕ ವರದಿಗಳ ಬೆಲೆಯೂ ಹೆಚ್ಚುತ್ತದೆ. ಆಂದಿನ ಸುದ್ದಿಗಳ ತೂಕದ ಆಧಾರದ ಮೇಲೆ ವರದಿಯ ಮೌಲ್ಯ ಮಾಪನ ಮಾಡಲಾಗುತ್ತದೆ ಎಂದು ನುಡಿದರು.
ವೈದ್ಯರು, ವಕೀಲರ ಸಂಗಡ ಹಂಚಿಕೊಳ್ಳುವ ಹಾಗೆ ಕಾರ್ಯಕ್ರಮದ ರೂಪುರೇಶೆಗಳ ಬಗ್ಗೆ ಮೊದಲೆ ತಿಳಿಸಬೇಕು. ಇದರಿಂದ ವರದಿಗಾರರೊಬ್ಬರ ಶ್ರಮ, ಸಮಯ ಉಳಿತಾಯವಾಗುತ್ತದೆ. ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ಸಾಕ್ಷಿಯಾಗಿ ನ್ಯಾಯಾಲಯ ಪರಿಗಣಿಸುವುದಿಲ್ಲ. ಯಾವುದೇ ಸಮಯದಲ್ಲಿ ತಮ್ಮ ನಿರ್ಣಯ ಬದಲಿಸಬಹುದು. ಪತ್ರಿಕೆಗಳು ಘಟನೆಯ ಕುರಿತು ಸಾಕ್ಷಿಯಾಗುತ್ತವೆ ಎಂದರು.
“ಸಾಕ್ಷರತೆ ವ್ಯಕ್ತಿಯೊಬ್ಬನ ಮೌಢ್ಯ, ಅಂಧಶ್ರದ್ದೆ ನಾಶ ಮಾಡಬೇಕು. ಧರ್ಮ ವಿಜ್ಞಾನಕ್ಕೆ ಸೆಡ್ಡು ಹೊಡೆಯಬಾರದು. ಒಬ್ಬರ ನಂಬಿಕೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ನಿಮ್ಮ ನಂಬಿಕೆಯನ್ನು ಬಲವಂತವಾಗಿ ಮತ್ತೊಬ್ಬರ ಮೇಲೆ ಹೇರಬಾರದು. ಅದು ಪ್ರಾಣಹಾನಿ, ಆರ್ಥಿಕ ನಷ್ಟ ಉಂಟು ಮಾಡಬಾರದು” ಎಂದು ಕನ್ನಡ ಮತ್ತು ವೈಜ್ಞಾನಿಕ ಸಂಘಟನೆಯ ಸ್ವರೂಪ ಒಂದು ಸಂವಾದ ಕುರಿತು ಚಿಂತಕ ಡಾ.ಆರ್.ಎಸ್. ರಾಜ ನಾಯಕ ಹೇಳಿದರು.
“ಸರ್ಕಾರ ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯವನ್ನು ಕೊಡಬೇಕು. ಸಮಾಜದೊಳಗೆ ಸ್ಥಿರತೆ ಇಲ್ಲದಿದ್ದರೆ ಸಕಾರಾತ್ಮಕ ಚಿಂತನೆ ಬೆಳೆಯಲು ಆಗುವುದಿಲ್ಲ. ವಿನಯ ಇಲ್ಲದ ಸಾಹಿತ್ಯ ವಿವೇಕವನ್ನು ಹೇಳಲು ಸಾಧ್ಯವಿಲ್ಲ. ಈಚೆಗೆ ನಗರಕ್ಕೆ ಇಂಗ್ಲೀಷ್, ಗ್ರಾಮೀಣ ಭಾಗಕ್ಕೆ ಕನ್ನಡ ಭಾಷೆಯಾಗಿ ಹಂಚಿಕೆಯಾಗುತ್ತಿದೆ. ಖಾಸಗಿಯವರು ಮಾತ್ರ ಚೆನ್ನಾಗಿ ನಡೆಸುತ್ತಾರೆ ಎಂಬ ಅಲಿಖಿತ ವಾದವನ್ನು ಬಿಡಬೇಕು. ಜಾತ್ಯಾತೀತ ಪದ ತೆಗೆಯಲು ಹೇಳುವ ಆರ್ಎಸ್ಎಸ್ ಮುಖಂಡರು ಜಾತಿವಾದದ ಬಗ್ಗೆ ಮಾತನಾಡುವುದಿಲ್ಲ” ಎಂದು ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಸಮಾರೋಪ ಸಮಾರಂಭದಲ್ಲಿ ಪ್ರಶ್ನಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾ.ಶ್ರೀಧರ್ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ್ರಾಜ್, ಕಾರ್ಯದರ್ಶಿ ಸಂತೋಷ್ ಹಾನಗಲ್ ಇದ್ದರು.
punctuation essential in journalism