ಮಲವಗೊಪ್ಪ ಶಾಲೆ ಇದ್ದಲ್ಲೇ ಆರಂಭಿಸಲು ನಿರ್ಧಾರ-ಸ್ವಂತ ಖರ್ಚಲ್ಲಿ ಸುಣ್ಣಬಣ್ಣ ಬಳೆಯಲು ತೀರ್ಮಾನ- Decision to start Malavagoppa school as it is

 SUDDILIVE || SHIVAMOGGA

ಮಲವಗೊಪ್ಪ ಶಾಲೆ ಇದ್ದಲ್ಲೇ ಆರಂಭಿಸಲು ನಿರ್ಧಾರ-ಸ್ವಂತ ಖರ್ಚಲ್ಲಿ  ಸುಣ್ಣಬಣ್ಣ ಬಳೆಯಲು ತೀರ್ಮಾನ-Decision to start Malavagoppa school as it is - decision to whitewash at own expense

School, Malvagoppa



ಮಕ್ಕಳಿಗೆ ಓಡಾಡಲು ತೊಂದರೆಯಾಗುತ್ತಿದೆ, ಮಕ್ಕಳ ದಾಖಲಾತಿ ಕುಸಿಯುತ್ತಿದೆ ಎಂಬ ಕಾರಣಕ್ಕೆ ರಸ್ತೆ ಅಗಲಿಕರಣ ಹೆಸರಲ್ಲಿ ಬೇರೆ ಕಡೆ ಶಿಫ್ಟ್ ಆಗಿದ್ದ ಶಾಲೆಯನ್ನು ಮತ್ತೆ ಅಲ್ಲೆ ಆರಂಭಿಸಲು ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಮುಂದಾಗಿದ್ದಾರೆ. ಸ್ವಂತ ಖರ್ಚಿನಲ್ಲಿ ಸುಣ್ಣಬಣ್ಣ ಬಳಸಿ, ಹೆಂಚು ಹಾಕಿಸಿ, ಆವರಣ ಸ್ವಚ್ಛಗೊಳಿಸುತಿದ್ದಾರೆ. ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಅನುಮತಿಯಷ್ಟೇ ಬಾಕಿ.

ಮಲವಗೊಪ್ಪ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ೭೫ ವರ್ಷ ಪೂರೈಸಿ ಅಮೃತ ಮಹೋತ್ಸವ ಸಹ ಆಚರಿಸಿದೆ. 1948ರ ಅವಧಿಯಲ್ಲಿ ಆರಂಭವಾದ 20 ವರ್ಷಗಳ ಕಾಲ ಪಾಳು ಬಿದ್ದಿತ್ತು. 1997-98ರಿಂದ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಊರಿನ ಮಕ್ಕಳಿಗೆ ಅನುಕೂಲವಾಗಲೆಂದು ಸ್ವಂತ ಖರ್ಚಿನಲ್ಲಿ ಶಾಲೆಯನ್ನು ಜೀರ್ಣೋದ್ಧಾರ ಮಾಡಿದ್ದರು. 1ರಿಂದ 5ನೇ ತರಗತಿವರೆಗೆ ಇಲ್ಲಿ ತರಗತಿಗಳು ಇದ್ದು ಅಲ್ಲಿಂದ ಇಲ್ಲಿವರೆಗೂ ಅತ್ಯುತ್ತಮವಾಗಿ ನಡೆದುಕೊಂಡು ಬಂದಿದ್ದ ಶಾಲೆಗೆ ರಸ್ತೆ ಅಗಲೀಕರಣ ಕಂಟಕ ಎದುರಾಯಿತು. ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ಮುಕ್ಕಾಲು ಭಾಗ ಶಾಲೆ ಹೋಗುತ್ತದೆ ಎಂಬ ಕಾರಣಕ್ಕೆ ಅದೇ ಊರಿನ 1 ಕಿ.ಮೀ ಅಂತರದಲ್ಲಿರುವ ಶಾಲೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಗೆ ಶಿಫ್ಟ್ ಮಾಡುತ್ತಿದ್ದಂತೆ ಸಮಸ್ಯೆಗಳು ಎದುರಾಯಿತು.

ಮೊದಲೇ ಒಂದೆರಡು ಕಿ.ಮೀ ದೂರದಿಂದ ಬರುತಿದ್ದ ಮಕ್ಕಳು ಹೆಚ್ಚುವರಿ ಒಂದು ಕಿ.ಮೀ ಹೋಗುವಂತಾಯಿತು. ಹೆದ್ದಾರಿ ಕಾರಣಕ್ಕೆ ಅಪಘಾತಗಳು ಸಹ ಹೆಚ್ಚಾಗಿದ್ದು ಪೋಷಕರಿಗೆ ಆತಂಕ ಎದುರಾಗಿತ್ತು. ಶಿಕ್ಷಣದ ಗುಣಮಟ್ಟ ಸಹ ಕುಸಿದು ಮಕ್ಕಳ ಸಂಖ್ಯೆ ಕುಸಿಯಿತು. 2023ರವರಗೆ 110ರಿಂದ 120 ಮಕ್ಕಳು ಓದುತ್ತಿದ್ದ ಶಾಲೆಯಲ್ಲಿ ಈಗ 60 ಮಕ್ಕಳು ಇದ್ದಾರೆ. ಇದರಿಂದ ನೊಂದ ಶಾಲೆಯ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ರಸ್ತೆ ಅಗಲೀಕರಣ ಆಗುವವರೆಗೂ ಹಳೇ ಶಾಲೆಯಲ್ಲಿ ಪಾಠ ಮಾಡಿ ಎಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅನುಮತಿ ಕೊಡದಿದ್ದರೂ ಶಾಲೆಯನ್ನು ಸಿದ್ಧತೆ ಮಾಡಿ ಹೋರಾಟ ಮಾಡಲು ಅಣಿಯಾಗಿದ್ದಾರೆ.

"1948ರಲ್ಲಿ ಆರಂಭವಾದ ಶಾಲೆಗೆ ಮೊದಲೆಲ್ಲ ಕುದುರೆಯಲ್ಲಿ ಬಂದು ಶಿಕ್ಷಕರು ಪಾಠ ಮಾಡಿ ಹೋಗುತ್ತಿದ್ದರು. ನಮ್ಮೂರಿನ ಮೊದಲ ಶಾಲೆ ಇದು. ಮಧ್ಯದಲ್ಲಿ 20 ವರ್ಷ ಪಾಳು ಬಿದ್ದಿತ್ತು. ಊರಿನವರೆಲ್ಲ ಹಣ ಹಾಕಿ  ಸರ್ವ ಶಿಕ್ಷಣ ಅಭಿಯಾನದಡಿ 1997-98ರಲ್ಲಿ ಮತ್ತೆ ಶಾಲೆ ಆರಂಭ ಮಾಡಿದ್ದೇವೆ. ಆಗ 15 ಸಾವಿರ ಖರ್ಚಾಗಿತ್ತು. 2023ರಲ್ಲಿ ರಸ್ತೆ ಅಗಲೀಕರಣ ಎಂದು ಇನ್ನೊಂದು ಶಾಲೆಗೆ ಶಿಫ್ಟ್ ಮಾಡಿದರು. ಎರಡು ವರ್ಷ ಆದರೂ ಜಾಗ ಹುಡುಕಲಿಲ್ಲ. ಹೊಸ ಕಟ್ಟಡ ಕಟ್ಟಿಸಿಕೊಟ್ಟಿಲ್ಲ. ಶಿಕ್ಷಣ ಇಲಾಖೆ ಕಾಲಹರಣ ಮಾಡಿದೆ. ಈಗ ಶಿಫ್ಟ್ ಮಾಡಿರುವ ಶಾಲೆಯ ಅರ್ಧ ಭಾಗ ಸಹ ಹೆದ್ದಾರಿಗೆ ಹೋಗುತ್ತದೆ. ಹೀಗೆ ಮಾಡಿದರೆ ಇರುವ ಎರಡು ಸರಕಾರಿ ಶಾಲೆ ಮುಚ್ಚಿಹೋಗಲಿದೆ. ಮೂರು ಬೂತ್ ಗಳ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಈ ಶಾಲೆಯೇ ಆಸರೆ. ಇಲ್ಲಿ ಎಸ್‌ಸಿ, ಹಿಂದುಳಿದ, ಅಲ್ಪಸಂಖ್ಯಾತ ಕುಟುಂಬಗಳು ಇವೆ. ಇವರೆಲ್ಲ ಖಾಸಗಿ ಶಾಲೆ ನೆಚ್ಚಿಕೊಂಡವರಲ್ಲ. ಈಗಿರುವ ಶಾಲೆಗೆ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದೆ ಅದಕ್ಕಾಗಿ ಇಲ್ಲೇ ಶಾಲೆ ಆರಂಭಿಸುವಂತೆ ಒತ್ತಾಯಿಸಿ ಹಳೇ ವಿದ್ಯಾರ್ಥಿಗಳೆಲ್ಲ ಹಣ ಹಾಕಿ 1 ಲಕ್ಷ ವೆಚ್ಚದಲ್ಲಿ ಸುಣ್ಣಬಣ್ಣ ಹೊಡೆಸಿ ಸಿದ್ಧತೆ ಮಾಡಿದ್ದೇವೆ. ಅನುಮತಿ ಕೇಳುತ್ತೇವೆ. ಅನುಮತಿ ಕೊಡುವವರೆಗೂ ಹೋರಾಟ ಮಾಡುತ್ತೇವೆ" ಎಂದು ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮಕ್ಕಳು ರಸ್ತೆ ದಾಟುವಾಗ ಅಪಘಾತಗಳು ಆಗುತ್ತಿವೆ. ಇದೇ ಶಾಲೆಯನ್ನೆ ಆರಂಭಿಸಬೇಕು. ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿದ್ದೇವೆ. ಶಿಕ್ಷಣ ಇಲಾಖೆ ಅನುಮತಿ ಕೊಡುವವರೆಗೂ ಹೋರಾಟ ನಡೆಸುತ್ತೇವೆ.

- ಯೋಗೇಶ್ ನಾಯ್ಕ್, ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಲವಗೊಪ್ಪ ತಾಂಡಾ

 Decision to start Malavagoppa school as it is 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close