SUDDILIVE || SHIVAMOGGA

ಭದ್ರಾವತಿ / ಶಿವಮೊಗ್ಗ: 43 ವರ್ಷದ ವಿಧವೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ನಿಂಬೆಗೊಂದಿ ಗ್ರಾಮದ 48 ವರ್ಷದ ವ್ಯಕ್ತಿಯ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಭದ್ರಾವತಿ ತಾಲೂಕಿನ ನಿಂಬೆಗೊಂದಿ ಗ್ರಾಮದ ವಾಸಿ ಶಿವಲಿಂಗಪ್ಪ ಎಂಬುವರ ಮಗ ರುದ್ರೇಶ (48) ಎಂದು ಗುರುತಿಸಲಾಗಿದೆ. ಈತ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತ ಎಂದು ಕೇಳಿಬಂದಿದೆ.
ಘಟನೆಯ ಹಿನ್ನೆಲೆ:
ಸಂತ್ರಸ್ತೆ ನೀಡಿದ ಹೇಳಿಕೆಯ ಪ್ರಕಾರ, ಸುಮಾರು 14 ವರ್ಷಗಳ ಹಿಂದೆ ಆಕೆ ಗರ್ಭಿಣಿಯಾಗಿದ್ದಾಗ ಆಕೆಯ ಗಂಡ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದರು. ಅಂದಿನಿಂದ ಆಕೆ ತನ್ನ 14 ವರ್ಷದ ಮಗನೊಂದಿಗೆ ನಿಂಬೆಗೊಂದಿ ಗ್ರಾಮದಲ್ಲೇ ವಾಸವಾಗಿದ್ದರು.
ಇದೇ ಬೀದಿಯಲ್ಲಿ ವಾಸವಾಗಿದ್ದ ಆರೋಪಿ ರುದ್ರೇಶ ಕಳೆದ ಮೂರು ವರ್ಷಗಳಿಂದ ಈಕೆಯ ಮನೆಗೆ ಬಂದು ಹೋಗುತ್ತಿದ್ದನು. 2026 ರ ಜನವರಿ 8 ರಂದು ರಾತ್ರಿ ಸುಮಾರು 9:30 ರ ಸಮಯದಲ್ಲಿ ಮಗ ನಡುಮನೆಯಲ್ಲಿ ಮಲಗಿದ್ದಾಗ, ಮನೆಗೆ ಬಂದ ರುದ್ರೇಶ ಬಲವಂತವಾಗಿ 2 ರಿಂದ 3 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರ ಬಳಿಯೂ ಹೇಳದಂತೆ ಬೆದರಿಕೆ ಹಾಕಿದ್ದನೆ ಎಂದು ದೂರಲಾಗಿದೆ.
ಆಸ್ಪತ್ರೆಯಲ್ಲಿ ಬೆಳಕಿಗೆ ಬಂದ ಸತ್ಯ:
ಸಂತ್ರಸ್ತೆಗೆ ಅರ್ಧ ತಲೆನೋವಿನ ಸಮಸ್ಯೆ ಇದ್ದು, ಮಾರ್ಚ್ ತಿಂಗಳಿನಲ್ಲಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಗಾಗಿ ತವರು ಮನೆಗೆ ತೆರಳಿದ್ದರು. ನಂತರ ಗಂಡನ ಮನೆಗೆ ಮರಳಿದಾಗ ಋತುಸ್ರಾವವಾಗದಿರುವುದನ್ನು ಕಂಡು ಹೆದರಿದಾಗ, ಆರೋಪಿಯು ತಲೆ ಆಪರೇಷನ್ ಆಗಿರುವುದರಿಂದ ಹೀಗಾಗಿದೆ ಎಂದು ನಂಬಿಸಿದ್ದನು.
ಆಗಸ್ಟ್ 19 ರಂದು ಸಂತ್ರಸ್ತೆಗೆ ಫಿಟ್ಸ್ ಮಾದರಿಯ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಆಕೆಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಮಹಿಳೆ 7 ತಿಂಗಳ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ದೂರು:
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೊಳೆಹೊನ್ನೂರು ಪೊಲೀಸ್ ಠಾಣೆಯ ಎಎಸ್ಐ ಶ್ರೀಮತಿ ಅನುರಾಧ ಅವರು ಆಗಸ್ಟ್ 30 ರಂದು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಪಿಯು ತನ್ನ ಯೋಗಕ್ಷೇಮ ವಿಚಾರಿಸಲು ಬಾರದೇ ಇದ್ದುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ದೂರು ನೀಡಿದ್ದಾರೆ.
ಈ ಕುರಿತು ಹೊಳೆಹೊನ್ನೂರು ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Accusation of sexually assaulting a widow and impregnating her