SUDDILIVE || SHIVAMOGGA
ಕುರುಬರ ನಿಂದನೆಯ ಆರೋಪ: ಸುಂದರೇಶ್ ಫೋಟೊ ಇರುವ ಬ್ಯಾನರ್‌ಗೆ ಬೆಂಕಿ, ಮುತ್ತಿಗೆ ಎಚ್ಚರಿಕೆ- Accusations of abusing shepherds: Banner with Sundaresh's photo set on fire, siege warning issued
ಶಿವಮೊಗ್ಗ: ಮಾಜಿ ಎಂಎಲ್‌ಸಿ ಆರ್. ಪ್ರಸನ್ನಕುಮಾರ್ ಅವರ ಕುರಿತು ಸುಂದರೇಶ್ ಮಾತನಾಡುವ ಸಂದರ್ಭದಲ್ಲಿ ಕುರುಬ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಹಾಗೂ ಕುರುಬ ಸಮಾಜದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯ ವಾಟಾಳ್ ಮಂಜು ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಿವಪ್ಪ ನಾಯಕನ ಪ್ರತಿಮೆ ಮುಂಭಾಗದಲ್ಲಿ ಸುಂದರೇಶ್ ಅವರ ಭಾವಚಿತ್ರವಿದ್ದ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪ್ರತಿಭಟನಾಕಾರರು ಸುಂದರೇಶ್ ವಿರುದ್ಧ ಘೋಷಣೆಗಳನ್ನು ಕೂಗಿ, ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ಮಂಜು, ಸುಂದರೇಶ್ ಅವರು ಕುರುಬ ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
“ಸುಂದರೇಶ್ ಅವರೇ, ಕುರುಬರನ್ನು ಕೆಣಕಬೇಡಿ. ದಯವಿಟ್ಟು ಬಂದು ಕುರುಬ ಸಮಾಜದ ಕ್ಷಮೆ ಕೇಳಬೇಕು. ಮೂರು ದಿನಗಳೊಳಗೆ ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ಮುತ್ತಿಗೆ ಹಾಕುವ ಹೋರಾಟ ನಡೆಸುತ್ತೇವೆ,” ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ಕುರುಬ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕೆಂಚುಕೋಟೆ ಮಾರಿಕಾಂಬ ದೇವಸ್ಥಾನ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಮುದಾಯದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಮಟ್ಟದಲ್ಲಿಯೂ ಕುರುಬ ಸಮುದಾಯದ ಸಂಘಟನೆಗಳು ಹಾಗೂ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ಸಮುದಾಯದ ಹಿತಾಸಕ್ತಿಗಳನ್ನು ಕಡೆಗಣಿಸಬಾರದು ಎಂದು ವಾಟಾಳ್ ಮಂಜು ಹೇಳಿದರು.
“ರಾಜಕಾರಣ ಬೇಕು, ಆದರೆ ಕುರುಬ ಜನಾಂಗ ಬೇಡ, ಜಾತಿ ಬೇಡ, ಸಮಾಜ ಬೇಡ ಎಂಬ ರೀತಿಯಲ್ಲಿ ನಡೆದುಕೊಳ್ಳಬಾರದು. ಅಧಿಕಾರ ಮತ್ತು ಅಂತಸ್ತು ಯಾವುದೇ ಸಮುದಾಯದ ಬೆಂಬಲದಿಂದ ಬಂದಿದ್ದರೂ, ಆ ಸಮುದಾಯದ ಭಾವನೆಗಳಿಗೆ ಗೌರವ ನೀಡಬೇಕು,” ಎಂದು ಅವರು ಹೇಳಿದರು.
ಸುಂದರೇಶ್ ಅವರು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಮೂರು ದಿನಗಳೊಳಗೆ ಕುರುಬ ಸಮಾಜದ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ಹಂತದಲ್ಲಿ ಅವರ ಮನೆಗೆ ಮುತ್ತಿಗೆ ಹಾಕುವ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ವೇಳೆ “ಧಿಕ್ಕಾರ” ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
Accusations of abusing shepherds: Banner with Sundaresh's photo set on fire, siege warning issued
