SUDDILIVE || SHIVAMOGGA
ಅಮೀರ್ ಅಹಮದ್ ವೃತ್ತಕ್ಕೆ ಸಾವರ್ಕರ್ ಹೆಸರು?; ವಿವಾದ ಬೇಡ ಎಂದ ಶಾಸಕ ಚೆನ್ನಬಸಪ್ಪ- Aamir Ahmed Circle named after Savarkar?; MLA Chennabasappa says no to controversy
ಶಿವಮೊಗ್ಗ: ನಗರದ ಅಮೀರ್ ಅಹಮದ್ ವೃತ್ತವನ್ನು ‘ಸಾವರ್ಕರ್ ವೃತ್ತ’ ಎಂದು ಕರೆಯಲಾಗುತ್ತಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಮೀರ್ ಅಹಮದ್ ವೃತ್ತಕ್ಕೆ ಸಾವರ್ಕರ್ ಹೆಸರು ಇಡುವ ವಿಚಾರದಲ್ಲಿ ತಾವು ಯಾವುದೇ ವಿವಾದಕ್ಕೆ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು. “ವಿನಾಕಾರಣ ವಿವಾದಗಳು ಬೇಡ. ಎಲ್ಲರೂ ಒಗ್ಗೂಡಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸೋಣ” ಎಂದು ಮನವಿ ಮಾಡಿದರು.
1973ರಲ್ಲಿಯೇ ನಗರಸಭೆಯಿಂದ ಅಮೀರ್ ಅಹಮದ್ ವೃತ್ತ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರದ ಬಗ್ಗೆ ತಾವು ಚರ್ಚೆಗೆ ಹೋಗುವುದಿಲ್ಲ ಎಂದರು. “ನಾವು ಯಾವುದರ ಬಗ್ಗೆಯೂ ಡಿಸ್ಪ್ಯೂಟ್ ಮಾಡಿಲ್ಲ. ಯಾರೋ ಮಾತನಾಡಿಕೊಂಡು ಹೋಗಿರುವುದಕ್ಕೆ ನಾನು ದಿಕ್ಕು ಕೊಡುವುದಕ್ಕೆ ಆಗುವುದಿಲ್ಲ” ಎಂದು ಹೇಳಿದರು.
ಈಗಾಗಲೇ ಸಾವರ್ಕರ್ ನಗರದ ಹೆಸರಿದೆ. ಸಾವರ್ಕರ್ ಅವರ ಹೆಸರಿನಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡುವ ಅಗತ್ಯವಿದ್ದರೆ ಅದಕ್ಕೆ ಶಕ್ತಿ ನೀಡಲಾಗುವುದು. ಸಾವರ್ಕರ್ ವೃತ್ತ ಎಂಬುದು ಅಧಿಕೃತವಾಗಿ ಎಲ್ಲೂ ಇಲ್ಲದಿದ್ದರೂ, ಸಾರ್ವಜನಿಕರ ಅಪೇಕ್ಷೆಯಂತೆ ಮುಂದಿನ ಕ್ರಮದ ಬಗ್ಗೆ ನೋಡಲಾಗುವುದು ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
ನಗರದ ವಿವಿಧ ವೃತ್ತಗಳಿಗೆ ಅಧಿಕೃತ ಹೆಸರಿಗಿಂತಲೂ ಆಡುಭಾಷೆಯಲ್ಲಿ ಬೇರೆ ಹೆಸರುಗಳು ಬಳಕೆಯಾಗುತ್ತಿರುವುದನ್ನು ಅವರು ಉದಾಹರಿಸಿದರು. ಗೋಪಿ ಸರ್ಕಲ್ ಅನ್ನು ಕೆಲವರು ತಾಲೂಕು ಕಚೇರಿ ಸರ್ಕಲ್, ಕಾನ್ವೆಂಟ್ ಸರ್ಕಲ್ ಅನ್ನು ಪ್ರಕಾಶ್ ಶೆಟ್ಟಿ ಚೌಕ ಎಂದು ಕರೆಯುವಂತೆಯೇ ಹಲವು ಹೆಸರುಗಳು ಬಳಕೆಯಲ್ಲಿವೆ ಎಂದು ಹೇಳಿದರು.
ಸಾವರ್ಕರ್ ಅವರ ಭಾವಚಿತ್ರವನ್ನು ಕಿತ್ತುಹಾಕುವ ಪ್ರಯತ್ನ ನಡೆದ ನಂತರ ಈ ವಿಚಾರಕ್ಕೆ ಹೆಚ್ಚಿನ ಚರ್ಚೆ ಆರಂಭವಾಗಿದೆ ಎಂದು ಶಾಸಕ ಚೆನ್ನಬಸಪ್ಪ ಹೇಳಿದರು. ಆದರೆ, ಈ ಕುರಿತು ತಾವು ಯಾವುದೇ ವಿವಾದಕ್ಕೆ ಹೋಗುವುದಿಲ್ಲ. ಯಾರಾದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅನಗತ್ಯ ಆಕ್ಷೇಪಣೆ ಮಾಡುವುದು ಸರಿಯಲ್ಲ ಎಂದರು.
‘ಸಾವರ್ಕರ್ ಹೆಸರನ್ನು ಶಾಶ್ವತವಾಗಿಡಲು ಬೇಕಾದ್ದನ್ನು ಮಾಡುತ್ತೇವೆ’
ಸಾವರ್ಕರ್ ಅವರ ಹೆಸರನ್ನು ಶಾಶ್ವತವಾಗಿಡಲು ಅಗತ್ಯವಾದ ಕೆಲಸಗಳನ್ನು ಮಾಡುತ್ತೇವೆ. ಕಳೆದ 52 ವರ್ಷಗಳಿಂದಲೂ ಈ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದು ಶಾಸಕ ಚೆನ್ನಬಸಪ್ಪ ಹೇಳಿದರು.
ಹಿಂದೂ ಮಹಾಸಭಾ ಗಣಪತಿ ಉತ್ಸವದ ಹಿನ್ನೆಲೆಯಲ್ಲಿರುವ ಬ್ಯಾಕ್ಡ್ರಾಪ್ನಲ್ಲಿಯೂ ಸಾವರ್ಕರ್ ಅವರ ಹೆಸರು ಹಾಗೂ ಭಾವಚಿತ್ರ ಇರುವುದನ್ನು ಉಲ್ಲೇಖಿಸಿದ ಅವರು, “ಅದಕ್ಕಿಂತ ಜಾಸ್ತಿ ಇನ್ನೇನು ಬೇಕು?” ಎಂದು ಪ್ರಶ್ನಿಸಿದರು.
‘ವಂದೇ ಮಾತರಂ’ ಮಹಾದ್ವಾರಕ್ಕೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಗೆ ಗೌರವ
ಗಣೇಶೋತ್ಸವದ ಸಂದರ್ಭದಲ್ಲಿ ನಿರ್ಮಿಸಲಾಗಿರುವ ‘ವಂದೇ ಮಾತರಂ’ ಮಹಾದ್ವಾರವನ್ನು ಸಮರ್ಥಿಸಿಕೊಂಡ ಶಾಸಕ ಚೆನ್ನಬಸಪ್ಪ, ಇದು ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಗೆ ನೀಡಿದ ಗೌರವ ಎಂದು ಹೇಳಿದರು.
“ನಮ್ಮ ಜೀವನದ ಅಸ್ತಿತ್ವವೇ ವಂದೇ ಮಾತರಂ. ಗಣೇಶೋತ್ಸವದ ಸಂದರ್ಭದಲ್ಲಿ ವಂದೇ ಮಾತರಂ ಮಹಾದ್ವಾರ ನಿರ್ಮಿಸಿರುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕ ಗಣೇಶೋತ್ಸವದ ಮೂಲಕ ದೇಶ ಕಟ್ಟುವ ಕಾರ್ಯಕ್ಕೆ ವೇದಿಕೆ ನಿರ್ಮಾಣವಾಯಿತು. ಶಿವಮೊಗ್ಗದಿಂದಲೂ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ನಡೆದಿವೆ. ಈ ಕಾರ್ಯ ಈಗಲೂ ಮುಂದುವರಿದಿದ್ದು, ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಶಾಸಕ ಚೆನ್ನಬಸಪ್ಪ ಹೇಳಿದರು.


0 ಕಾಮೆಂಟ್ಗಳು