SUDDILIVE || SHIVAMOGGA
ಶಿವಮೊಗ್ಗದಲ್ಲಿ ನಾನ್ ವೆಜ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮುಂದುವರಿಕೆ-Food safety officials continue to raid non-veg hotels in Shivamogga
ಶಿವಮೊಗ್ಗ: ನಗರದಲ್ಲಿ ಆಹಾರ ಸೇವನೆಯ ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ಮುಂದುವರಿದಿದ್ದು, ಮಂಗಳವಾರ ನಾಲ್ಕು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಆಹಾರ ಸುರಕ್ಷತಾ ಅಧಿಕಾರಿ ಡಾ. ಮೈತ್ರಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸ್ವಚ್ಛತೆ, ಆಹಾರ ಸಂಗ್ರಹಣೆ ಹಾಗೂ ಲೇಬಲಿಂಗ್‌ಗೆ ಸಂಬಂಧಿಸಿದ ಹಲವು ನ್ಯೂನತೆಗಳು ಪತ್ತೆಯಾಗಿವೆ.
ನಗರದ ತಾಜ್ ಹೋಟೆಲ್, ಬ್ರೈಟ್ ಹೋಟೆಲ್, ಲಕ್ಷ್ಮೀ ಕಾಂಡಿಮೆಂಟ್ಸ್ ಹಾಗೂ ಹೋಳಿಗೆ ಮನೆ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ತಪಾಸಣೆ ವೇಳೆ ಕೆಲವು ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸದೇ ಇಟ್ಟಿರುವುದು, ತಯಾರಿಸಿದ ಆಹಾರ ಪದಾರ್ಥಗಳಿಗೆ ಸರಿಯಾದ ಲೇಬಲ್ ಹಾಗೂ ತಯಾರಿಕೆ/ಅವಧಿ ದಿನಾಂಕ ನಮೂದಿಸದಿರುವುದು ಸೇರಿದಂತೆ ಹಲವು ನ್ಯೂನತೆಗಳು ಕಂಡುಬಂದಿವೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ಮೈತ್ರಿ ತಿಳಿಸಿದ್ದಾರೆ.
ಇದಲ್ಲದೆ, ಅಡುಗೆಮನೆಯಲ್ಲಿ ಬಳಸುತ್ತಿದ್ದ ಅಡುಗೆ ಸೋಡಾದ ಪ್ಯಾಕೆಟ್‌ಗಳಲ್ಲಿ ಕಂಪನಿಯ ಹೆಸರು ಹಾಗೂ ಎಕ್ಸ್‌ಪೈರಿ ದಿನಾಂಕದ ಮಾಹಿತಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೆಲವು ಸ್ಥಳಗಳಲ್ಲಿ ಪ್ರತಿ ಒಲೆಯ ಬಳಿಯೂ ಟೇಸ್ಟಿಂಗ್ ಪೌಡರ್ ಇಟ್ಟುಕೊಂಡಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ತಾಜ್ ಹೋಟೆಲ್‌ನಲ್ಲಿ 15 ಲೀಟರ್ ಅವಧಿ ಮೀರಿದ ಹಾಲು
ತಪಾಸಣೆಯ ಸಂದರ್ಭದಲ್ಲಿ ತಾಜ್ ಹೋಟೆಲ್‌ನಲ್ಲಿ ಅವಧಿ ಮೀರಿದ ನಂದಿನಿ ಹಾಲಿನ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಒಟ್ಟು ಸುಮಾರು 15 ಲೀಟರ್ ಅವಧಿ ಮೀರಿದ ಹಾಲನ್ನು ಹೋಟೆಲ್‌ನಲ್ಲಿ ಇಟ್ಟುಕೊಂಡಿರುವುದು ಕಂಡುಬಂದಿದೆ ಎಂದು ಡಾ. ಮೈತ್ರಿ ತಿಳಿಸಿದ್ದಾರೆ.
ಆಹಾರ ಪದಾರ್ಥಗಳನ್ನು ಫ್ರೀಜರ್‌ನಲ್ಲಿ ಸೂಕ್ತ ತಾಪಮಾನ ಹಾಗೂ ನಿಯಮಾನುಸಾರ ಸಂಗ್ರಹಿಸದಿರುವುದು, ತಯಾರಿಸಿದ ಆಹಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದಿರುವುದು ಸೇರಿದಂತೆ ಸ್ವಚ್ಛತೆ ಮತ್ತು ಆಹಾರ ಸಂಗ್ರಹಣೆಗೆ ಸಂಬಂಧಿಸಿದ ನ್ಯೂನತೆಗಳೂ ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ.
ತಾಜ್, ಬ್ರೈಟ್ ಹೋಟೆಲ್‌ಗಳಿಗೆ ಎಚ್ಚರಿಕೆ
ತಾಜ್ ಮತ್ತು ಬ್ರೈಟ್ ಹೋಟೆಲ್‌ಗಳಲ್ಲಿ ಕಂಡುಬಂದ ನ್ಯೂನತೆಗಳ ಹಿನ್ನೆಲೆಯಲ್ಲಿ ತಕ್ಷಣಕ್ಕೆ ನೋಟಿಸ್ ನೀಡುವ ಬದಲು ಎಚ್ಚರಿಕೆ ನೀಡಲಾಗಿದೆ ಎಂದು ಎಸಿ ಡಾ. ಮೈತ್ರಿ ತಿಳಿಸಿದ್ದಾರೆ.
ಪತ್ತೆಯಾಗಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆಹಾರ ಪರವಾನಗಿ ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಹೋಟೆಲ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ.
ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವುದು, ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವುದು, ಅವಧಿ ಮೀರಿದ ಉತ್ಪನ್ನಗಳನ್ನು ಬಳಸದಿರುವುದು ಹಾಗೂ ಆಹಾರ ತಯಾರಿಕಾ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಹೋಟೆಲ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ತಪಾಸಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಲೈವ್ ಜೊತೆ ಮಾತನಾಡಿದ ಉಪವಿಭಾಗಾಧಿಕಾರಿ ಡಾ. ಮೈತ್ರಿ, ಮಂಗಳವಾರ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ತಾಜ್ ಮತ್ತು ಬ್ರೈಟ್ ಹೋಟೆಲ್‌ಗಳಲ್ಲಿ ಪ್ರಮುಖ ನ್ಯೂನತೆಗಳು ಕಂಡುಬಂದಿವೆ. ಅವುಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದ್ದು, ನಿಯಮ ಪಾಲಿಸದಿದ್ದಲ್ಲಿ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

