ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತು: ಪತಿಗೆ ಜೀವಾವಧಿ ಶಿಕ್ಷೆ, ₹2.10 ಲಕ್ಷ ದಂಡ- Husband convicted of murdering wife: Life imprisonment, fined ₹2.10 lakh

 SUDDILIVE || SHIVAMOGGA

ಪತ್ನಿಯನ್ನು ಕೊಲೆ ಮಾಡಿದ ಆರೋಪ ಸಾಬೀತು: ಪತಿಗೆ ಜೀವಾವಧಿ ಶಿಕ್ಷೆ, ₹2.10 ಲಕ್ಷ ದಂಡ- Husband convicted of murdering wife: Life imprisonment, fined ₹2.10 lakh  
Murder, conviction

ಶಿವಮೊಗ್ಗ: ಪತ್ನಿಯನ್ನು ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು ಹಾಗೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಪತಿಗೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹2.10 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

ಶಿವಮೊಗ್ಗ ನಗರದ ಟಿಪ್ಪುನಗರ ನಿವಾಸಿ ಅಬ್ದುಲ್ ಶೊಯೆಬ್ (26) ಶಿಕ್ಷೆಗೆ ಗುರಿಯಾದ ಆರೋಪಿ. ಮೃತರನ್ನು ಕೌಸರ್ ಫಿಜಾ (20) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಅಬ್ದುಲ್ ಶೊಯೆಬ್ ಮತ್ತು ಕೌಸರ್ ಫಿಜಾ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿತ್ತು. ಆರೋಪಿ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೌಸರ್ ಫಿಜಾ, ‘ನಾನು ನಿಮಗೆ ಇಷ್ಟವಿಲ್ಲದಿದ್ದರೆ ನನ್ನನ್ನು ಬಿಟ್ಟುಬಿಡಿ’ ಎಂದು ಹೇಳಿದ್ದರು. ಇದರಿಂದ ಆರೋಪಿ ಆಕೆಯ ಮೇಲೆ ಅನುಮಾನಗೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

2021ರ ಅ.16ರಂದು ಕೊಲೆ:
2021ರ ಅಕ್ಟೋಬರ್ 16ರಂದು ಬೇರೆ ಬಾಡಿಗೆ ಮನೆ ನೋಡಿದ್ದೇನೆ, ಇಬ್ಬರೂ ಹೋಗಿ ನೋಡಿಕೊಂಡು ಬರೋಣ ಎಂದು ಪತ್ನಿಯನ್ನು ನಂಬಿಸಿದ ಆರೋಪಿ, ಕಾರಿನಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಹಾಳೂರು-ಅನುಪಿನಕಟ್ಟೆ ರಸ್ತೆಯ ಹೊನ್ನಪ್ಪ ಲೇಔಟ್‌ಗೆ ಕರೆದೊಯ್ದು, ಸಂಜೆ 5.15ರಿಂದ 5.45ರ ನಡುವಿನ ಅವಧಿಯಲ್ಲಿ ಆಕೆಯೊಂದಿಗೆ ಗಲಾಟೆ ಮಾಡಿ ಚಾಕುವಿನಿಂದ ಇರಿದು, ಮಚ್ಚಿನಿಂದ ತಲೆಗೆ ಹೊಡೆದು, ಕಲ್ಲಿನಿಂದ ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿತ್ತು.

ಈ ಸಂಬಂಧ ಮೃತರ ತಾಯಿ ಕೌಸರ್ ಫರ್ವಿಜ್ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.341/2021, ಭಾರತೀಯ ದಂಡ ಸಂಹಿತೆಯ ಕಲಂ 498(ಎ) ಮತ್ತು 302ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಅಂದಿನ ತನಿಖಾಧಿಕಾರಿಯಾಗಿದ್ದ ತುಂಗಾನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದೀಪಕ್ ಎಂ.ಎಸ್. ಅವರು ತನಿಖೆ ಪೂರ್ಣಗೊಳಿಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಪಿ.ಓ. ಪುಷ್ಪಾ ವಾದ ಮಂಡಿಸಿದ್ದರು. ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ. ಅವರು ಸೆಪ್ಟೆಂಬರ್ 23, 2026ರಂದು ತೀರ್ಪು ಪ್ರಕಟಿಸಿದ್ದಾರೆ.

ತೀರ್ಪಿನಂತೆ ಆರೋಪಿಗೆ ಐಪಿಸಿ ಕಲಂ 498(ಎ) ಮತ್ತು 302ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹2,10,000 ದಂಡ ವಿಧಿಸಲಾಗಿದೆ. ಜೊತೆಗೆ ನೊಂದವರ ಕುಟುಂಬದವರಿಗೆ ₹2,05,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Husband convicted of murdering wife: Life imprisonment, fined ₹2.10 lakh  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close