SUDDILIVE || BHADRAVATHI
ಭದ್ರಾವತಿಯಲ್ಲಿ ಮತ್ತೆ ಸಂಚಲನ ಮೂಡಿಸಿದ ಎಸಿ ಡಾ.ಮೈತ್ರಿ-AC Dr. Maitri creates a stir again in Bhadravati
ಭದ್ರಾವತಿ: ನಗರದ ವಿವಿಧ ಹೋಟೆಲ್ಗಳು, ಬೇಕರಿಗಳು ಹಾಗೂ ಸಿಹಿ ತಿನಿಸುಗಳ ತಯಾರಿಕೆ ಮತ್ತು ಮಾರಾಟ ಕೇಂದ್ರಗಳ ಮೇಲೆ ಬುಧವಾರ ಸಂಜೆ ಉಪವಿಭಾಗಾಧಿಕಾರಿ ಡಾ. ಹೆಚ್.ಪಿ.ಎಸ್. ಮೈತ್ರಿ ಹಾಗೂ ತಹಶೀಲ್ದಾರ್ ಪ್ರದೀಪ್ ದೇವಗಿರಿ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತು. ಈ ವೇಳೆ ರಾಸಾಯನಿಕ ಬಣ್ಣ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲನೆಗಾಗಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.
ದಾಳಿಯ ಸಂದರ್ಭದಲ್ಲಿ ಅವಧಿ ಮುಗಿದ ಅಡುಗೆ ಪದಾರ್ಥಗಳ ಬಳಕೆ, ಆಹಾರ ತಯಾರಿಕೆಯಲ್ಲಿ ರಾಸಾಯನಿಕ ವಸ್ತುಗಳ ಬಳಕೆ, ತಿನಿಸುಗಳ ಪ್ಯಾಕೆಟ್ಗಳ ಮೇಲೆ ದರ ಮತ್ತು ಅವಧಿ ನಮೂದಿಸುವ ಲೇಬಲ್ಗಳನ್ನು ಅಳವಡಿಸದಿರುವುದು ಹಾಗೂ ಸ್ವಚ್ಛತೆಯ ಕೊರತೆ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಂಗಡಿ ಮತ್ತು ಹೋಟೆಲ್ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಪಾನ್ ಶಾಪ್ಗಳಲ್ಲಿ ಬೀಡಾ ತಯಾರಿಕೆಗೆ ಬಳಸುವ ಪದಾರ್ಥಗಳ ಸಂಗ್ರಹಣೆ ಹಾಗೂ ಸ್ವಚ್ಛತೆಯ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಪಾದಚಾರಿಗಳು ಸಂಚರಿಸುವ ದಾರಿಗಳಲ್ಲಿ ಉಗುಳಿರುವುದನ್ನು ಗಮನಿಸಿದ ಉಪವಿಭಾಗಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಿಹಿ ತಿನಿಸು, ಬ್ರೆಡ್ ಮತ್ತು ಬನ್ಗಳನ್ನು ತಯಾರಿಸುವ ಕೇಂದ್ರಗಳಲ್ಲಿ ಬಳಕೆಗೆ ಅರ್ಹವಲ್ಲದ ವಸ್ತುಗಳು ಕಂಡುಬಂದಿರುವುದರ ಜೊತೆಗೆ, ಕ್ರೀಮ್ಗಳು ಹಾಗೂ ಕೇಕ್ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲಿಯೂ ಲೋಪಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಅಧಿಕಾರಿಗಳ ತಂಡ ಕ್ರಮ ಕೈಗೊಂಡಿತು.
ಹೋಟೆಲ್ಗಳು ಮತ್ತು ಅಂಗಡಿಗಳಲ್ಲಿ ಅಗತ್ಯ ಪರವಾನಗಿಗಳನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಸೂಚಿಸಲಾಯಿತು. ಮಾಂಸಾಹಾರಿ ಹೋಟೆಲ್ಗಳಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಆಹಾರ ತಯಾರಿಕೆಗೆ ಬಳಸುತ್ತಿದ್ದ ಹಂಚುಗಳ ಸ್ಥಿತಿಯನ್ನೂ ಪರಿಶೀಲಿಸಲಾಯಿತು. ಅನುಪಯುಕ್ತವಾಗಿರುವ ಹಂಚುಗಳನ್ನು ತೆಗೆದುಹಾಕಿ, ಹೊಸ ಹಂಚುಗಳನ್ನು ಅಳವಡಿಸಿಕೊಂಡು ಆಹಾರ ತಯಾರಿಸಬೇಕು ಎಂದು ಹೋಟೆಲ್ ಮಾಲೀಕರಿಗೆ ಮುನ್ನೆಚ್ಚರಿಕೆ ನೀಡಲಾಯಿತು.
ಅಧಿಕಾರಿಗಳು ಭಾಗಿ
ತಹಶೀಲ್ದಾರ್ ಪ್ರದೀಪ್ ದೇವಗಿರಿ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಫ್ಎಸ್ಎಸ್ಎಐ ಫುಡ್ ಇನ್ಸ್ಪೆಕ್ಟರ್ಗಳಾದ ಶಶಿಕುಮಾರ್, ಮನೋಜ್ ಬಿ.ಎಂ., ಉಮೇಶ್, ಮನೋಜ್ ಮತ್ತು ಸುಮಾ, ಉಪತಹಶೀಲ್ದಾರ್ ಮಂಜ ನಾಯಕ್, ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಶಿವಣ್ಣ ಕೂಡ್ಲಿಗೆರೆ ಹಾಗೂ ಆರ್ಐ ಅನಿಲ್ ರಾಜ್ ಪಾಲ್ಗೊಂಡಿದ್ದರು.
AC Dr. Maitri creates a stir again in Bhadravati
