ಇಸ್ಪೀಟ್ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗೆ ಮಚ್ಚಿನಿಂದ ಬೆದರಿಕೆ- Man who informed police about Ispeet threatened with machete

 SUDDILIVE || SHIVAMOGGA

ಇಸ್ಪೀಟ್ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗೆ ಮಚ್ಚಿನಿಂದ ಬೆದರಿಕೆ- Man who informed police about Ispeet threatened with machete  
Police, ispit


ಭದ್ರಾವತಿ:
ನಗರ ಹಾಗೂ ಸುತ್ತಮುತ್ತ ಅಕ್ರಮ ಇಸ್ಪೀಟ್ ಸೇರಿದಂತೆ ಜೂಜಾಟ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯ ಕಾರಿಗೆ ಮಚ್ಚಿನಿಂದ ಹೊಡೆದು, ಬೆದರಿಕೆ ಹಾಕಿದ ಆರೋಪದ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಸೆ.27ರಂದು ಮಧ್ಯಾಹ್ನ 3.30ರ ಸುಮಾರಿಗೆ ಭದ್ರಾವತಿಯ ಸಿದ್ದಾಪುರದ ಕೆರೆಕಟ್ಟೆ ಚೌಡಮ್ಮ ದೇವಸ್ಥಾನದ ಬಳಿ ಘಟನೆ ನಡೆದಿದೆ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ಗೋಕುಲ್ ಕೃಷ್ಣ (36) ಅವರು ಅಕ್ರಮ ಜೂಜಾಟದ ಕುರಿತು ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತಿದ್ದರು ಎನ್ನಲಾಗಿದೆ. ಭದ್ರಾವತಿಯ ತಮ್ಮಡಿಹಳ್ಳಿ ಹಾಗೂ ರಾಮೇನಕೊಪ್ಪ ಸೇರಿದಂತೆ ವಿವಿಧೆಡೆ ನಡೆಯುತ್ತಿದ್ದ ಜೂಜಾಟದ ಬಗ್ಗೆ ಮಾಹಿತಿ ನೀಡಿದ ಬಳಿಕ, ಶಂಕರೀಪುರ ಮಾರ್ಗವಾಗಿ ಭದ್ರಾವತಿಯತ್ತ ಕಾರಿನಲ್ಲಿ ಬರುತ್ತಿದ್ದ ವೇಳೆ ಮೂರು ಬೈಕ್‌ಗಳಲ್ಲಿ ಬಂದ ವ್ಯಕ್ತಿಗಳು ಕಾರನ್ನು ಹಿಂಬಾಲಿಸಿ ಸಿದ್ದಾಪುರದ ಬಳಿ ಅಡ್ಡಗಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾರನ್ನು ನಿಧಾನವಾಗಿ ತಿರುಗಿಸುತ್ತಿದ್ದ ಸಂದರ್ಭದಲ್ಲಿ ಬೈಕ್‌ಗಳಲ್ಲಿ ಬಂದ ವ್ಯಕ್ತಿಗಳು ಕಾರಿನ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದು, ದೊಣ್ಣೆಗಳಿಂದಲೂ ಕಾರಿಗೆ ಹೊಡೆದು ಜಖಂಗೊಳಿಸಲು ಮುಂದಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ವೇಳೆ ಆರೋಪಿಗಳ ಪೈಕಿ ಒಬ್ಬಾತ, ಪೊಲೀಸರಿಗೆ ಮಾಹಿತಿ ನೀಡಿ ಜೂಜಾಟದ ಆಟ ನಿಲ್ಲಿಸಲು ಬಂದಿದ್ದೀಯೆ ಎಂದು ಅವಾಚ್ಯವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಗೋಕುಲ್ ಕೃಷ್ಣ ಆರೋಪಿಸಿದ್ದಾರೆ.

ತಕ್ಷಣ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಗೆ ತೆರಳಿದ್ದು, ಬೈಕ್ ಸವಾರರು ಸುಮಾರು 500 ಮೀಟರ್‌ವರೆಗೆ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಿಂದ ಕಾರಿಗೆ ಸುಮಾರು ₹20 ಸಾವಿರ ನಷ್ಟವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯ ಕಲಂ 126(2), 352, 351(2), 324(3) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭದ್ರಾವತಿ ಭಾಗದಲ್ಲಿ ಇಸ್ಪೀಟ್ ಹಾಗೂ ಅಕ್ರಮ ಜೂಜಾಟದ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುವವರನ್ನೇ ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜೂಜಾಟದ ವಿರುದ್ಧ ಮಾಹಿತಿ ನೀಡುವ ನಾಗರಿಕರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

Man who informed police about Ispeet threatened with machete  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close