SUDDILIVE || SHIVAMOGGA
ಲಾಕರ್ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷವಿಲ್ಲ: ಸಿಟಿ ಕೋ ಆಪರೇಟಿವ್ ಬ್ಯಾಂಕ್-There is no loophole in the locker system: City Cooperative Bank
ಶಿವಮೊಗ್ಗ: ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಲಾಕರ್ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ನಡೆದಿಲ್ಲ. ಗ್ರಾಹಕರು ಯಾವುದೇ ಸಂಶಯಕ್ಕೆ ಒಳಗಾಗಬಾರದು ಎಂದು ಬ್ಯಾಂಕಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಬ್ಯಾಂಕಿನ ಅಧ್ಯಕ್ಷ ಕೆ. ರಂಗನಾಥ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಈ ಕುರಿತು ಸ್ಪಷ್ಟನೆ ನೀಡಿದ್ದು, ಇತ್ತೀಚೆಗೆ ಬ್ಯಾಂಕಿನ ಗ್ರಾಹಕರೊಬ್ಬರು ಲಾಕರ್‌ನಲ್ಲಿದ್ದ ಒಡವೆಗಳು ಕಾಣೆಯಾಗಿವೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಗ್ರಾಹಕರು ಲಾಕರ್ ವ್ಯವಹಾರ ನಡೆಸುವ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರೊಂದಿಗೆ ಲಾಕರ್ ಕೊಠಡಿಗೆ ತೆರಳಿ, ಕೀ ತೆಗೆದು ಬಳಿಕ ಕೊಠಡಿಯಿಂದ ಹೊರಬರುತ್ತಾರೆ. ಗ್ರಾಹಕರು ತಮ್ಮ ಲಾಕರ್‌ನಲ್ಲಿ ಏನು ಇಡುತ್ತಾರೆ ಅಥವಾ ಏನು ತೆಗೆಯುತ್ತಾರೆ ಎಂಬ ಮಾಹಿತಿ ಬ್ಯಾಂಕಿಗೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಗ್ರಾಹಕರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಅದರ ಹೊಣೆಗಾರಿಕೆಯೂ ಗ್ರಾಹಕರದ್ದೇ ಎಂದು ರಂಗನಾಥ್ ತಿಳಿಸಿದ್ದಾರೆ.
ಗ್ರಾಹಕರು ಲಾಕರ್‌ನಲ್ಲಿ ವ್ಯವಹಾರ ನಡೆಸಿ ಬಾಗಿಲಿಗೆ ಕೀ ಹಾಕಿಕೊಂಡು ತೆರಳಿದ ಬಳಿಕ, ಅವರ ಉಪಸ್ಥಿತಿಯಿಲ್ಲದೆ ಯಾವುದೇ ಸಂದರ್ಭದಲ್ಲೂ ಲಾಕರ್ ತೆರೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಗ್ರಾಹಕರು 2025ರ ಅಕ್ಟೋಬರ್ 9ರಂದು ಲಾಕರ್‌ನಲ್ಲಿ ಒಡವೆಗಳನ್ನು ಇಟ್ಟಿದ್ದು, 2026ರ ಸೆಪ್ಟೆಂಬರ್ 22ರಂದು ಮತ್ತೆ ಬಂದು ಪರಿಶೀಲಿಸಿದಾಗ ಅವು ಕಾಣೆಯಾಗಿವೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಲಾಕರ್‌ನಲ್ಲಿ ಗ್ರಾಹಕರು ಯಾವ ವಸ್ತುಗಳನ್ನು ಇಟ್ಟಿದ್ದರು ಎಂಬುದರ ಬಗ್ಗೆ ಬ್ಯಾಂಕಿಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಮಾಡಲಾಗಿದೆ ಎನ್ನಲಾಗುತ್ತಿರುವ ಆರೋಪಗಳು ಶುದ್ಧ ಸುಳ್ಳು. ಬ್ಯಾಂಕಿನಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಬ್ಯಾಂಕಿನಲ್ಲಿಯೇ ಒಡವೆಗಳು ಕಾಣೆಯಾಗಿವೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದ್ದು, ಇದರಲ್ಲಿ ಬ್ಯಾಂಕ್ ಸಿಬ್ಬಂದಿಯ ಕೈವಾಡವಿದೆ ಎಂಬ ಆರೋಪವೂ ಆಧಾರರಹಿತವಾಗಿದೆ ಎಂದು ರಂಗನಾಥ್ ಹೇಳಿದ್ದಾರೆ.
114 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕಿನ ಕುರಿತು ಪ್ರಕಟವಾಗಿರುವ ಸುದ್ದಿಯನ್ನು ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಸಂಪೂರ್ಣವಾಗಿ ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ. ಗ್ರಾಹಕರು ಬ್ಯಾಂಕಿನ ವಿರುದ್ಧ ದೂರು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆ ಬ್ಯಾಂಕಿಗೆ ತಲುಪಿಲ್ಲ ಮತ್ತು ಈವರೆಗೆ ಯಾವುದೇ ತನಿಖೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ತನಿಖೆ ನಡೆದರೆ ಸತ್ಯಾಸತ್ಯತೆಗಳು ಹೊರಬರಲಿವೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಹಾಗೂ ವಿಶ್ವಾಸಾರ್ಹತೆ ದೃಢವಾಗಿದ್ದು, ಗ್ರಾಹಕರು ಯಾವುದೇ ಸಂಶಯವಿಲ್ಲದೆ ಬ್ಯಾಂಕಿನ ವ್ಯವಹಾರ ಮುಂದುವರಿಸಬಹುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದೆ.
There is no loophole in the locker system: City Cooperative Bank
