SUDDILIVE || SHIVAMOGGA
ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಚರ್ಚೆ; ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಖಚಿತ: ಕೆ.ಎಸ್.ಈಶ್ವರಪ್ಪ- Discussions still on joining BJP; Will contest assembly elections for sure: K.S. Eshwarappa
ಶಿವಮೊಗ್ಗ: ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಹಾಗೂ ವಿವಿಧ ಸಮಾಜಗಳ ಪ್ರಮುಖರೊಂದಿಗೆ ಈಗಾಗಲೇ ಮೂರು ಹಂತಗಳಲ್ಲಿ ಸಭೆ ನಡೆಸಿದ್ದು, ಈ ಬಗ್ಗೆ ಇನ್ನೂ ಕೆಲವು ದಿನ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನಕ್ಕೆ ಮಾರ್ಗದರ್ಶನ ನೀಡಿದ ಸಂಸ್ಥೆ ಆರ್‌ಎಸ್‌ಎಸ್. ಹಿಂದೂ ಸಿದ್ಧಾಂತವನ್ನು ನೀಡಿದ ಆ ಸಂಸ್ಥೆಯನ್ನು ತಮ್ಮ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿಗೆ ಸೇರ್ಪಡೆಯಾಗುವಂತೆ ಆರ್‌ಎಸ್‌ಎಸ್‌ನ ಪ್ರಮುಖರು ತಮ್ಮೊಂದಿಗೆ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಪ್ರಮುಖರು, ವಿವಿಧ ಸಮಾಜಗಳ ಮುಖಂಡರು ಹಾಗೂ ತಮ್ಮೊಂದಿಗೆ ಕೆಲಸ ಮಾಡಿದ ಹಿತೈಷಿಗಳೊಂದಿಗೆ ಮೂರು ಹಂತಗಳಲ್ಲಿ ಸಭೆ ನಡೆಸಲಾಗಿದೆ. ಬಿಜೆಪಿ ಸೇರ್ಪಡೆಗೊಂಡರೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸೂಕ್ತ ಭರವಸೆ ದೊರೆತ ಬಳಿಕವೇ ತೀರ್ಮಾನ ಕೈಗೊಳ್ಳುವಂತೆ ಹಿತೈಷಿಗಳು ಸಲಹೆ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
"ಹಿಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಏಕೆ ನೀಡಲಿಲ್ಲ ಎಂಬುದು ನಮಗೆ ಗೊತ್ತಿಲ್ಲ. ಈ ಬಾರಿ ಯಾರೇ ಬಂದು ಭರವಸೆ ನೀಡಿದರೂ ಪರಿಶೀಲಿಸಿ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧಿಸಿ. ಮತ್ತೆ ಮೋಸ ಹೋಗಬೇಡಿ. ನಿಮ್ಮನ್ನು ನಂಬಿರುವ ಸಾವಿರಾರು ಕಾರ್ಯಕರ್ತರಿಗೆ ಅನ್ಯಾಯವಾಗಬಾರದು" ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ತಾವು ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಈಶ್ವರಪ್ಪ, "ನನ್ನ ರಾಜಕೀಯ ಶುರುವಾಗಿದ್ದೇ ಬಿಜೆಪಿಯಿಂದ. ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಕಡೆಗಳಿಂದ ಆಹ್ವಾನ ಬಂದಿದ್ದರೂ ಹೋಗಿಲ್ಲ. ಕೊನೆಯ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ" ಎಂದು ಹೇಳಿದರು.
ಜನಸೇನಾ ಪಕ್ಷದಿಂದ ಬಂದಿರುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ ಅವರು, ಆ ಪಕ್ಷದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಪವನ್ ಕಲ್ಯಾಣ್ ಅವರು ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ ತಾವು ಯಾವುದೇ ಕಾರಣಕ್ಕೂ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಖಚಿತ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ನೂರಕ್ಕೆ ನೂರು ಖಚಿತ ಎಂದು ಕೆ.ಎಸ್. ಈಶ್ವರಪ್ಪ ಘೋಷಿಸಿದರು. ಆದರೆ ತಾವು ಸ್ಪರ್ಧಿಸಬೇಕೋ ಅಥವಾ ಪುತ್ರ ಕಾಂತೇಶ್ ಸ್ಪರ್ಧಿಸಬೇಕೋ ಎಂಬುದನ್ನು ಇನ್ನೂ ಸಮಯವಿರುವುದರಿಂದ ಹಿತೈಷಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗದ ವಿವಿಧ ಸಮುದಾಯಗಳ ಮುಖಂಡರು ತಮ್ಮನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ತಮಗೆ ಅನ್ಯಾಯವಾಗಿದೆ, ಈ ಬಾರಿ ಸ್ಪರ್ಧಿಸಲೇಬೇಕು ಎಂದು ಹಿತೈಷಿಗಳು ಒತ್ತಾಯಿಸುತ್ತಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪಕ್ಷವನ್ನು ಕಟ್ಟಿದವರು ಹಾಗೂ ಹಿಂದುತ್ವದ ವಿಚಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಘಟನೆಯೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಜೋಡಿಸಬೇಕು. ಈ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ನಡೆಯಬೇಕೆಂಬುದು ತಮ್ಮ ಆಶಯವೂ ಆಗಿದೆ ಎಂದರು.
ಬಿಜೆಪಿ ಸೇರ್ಪಡೆ ವಿಚಾರ: ವಿಜಯೇಂದ್ರ ಅವರು ಕಾಂತೇಶ್ ಜೊತೆ ಮಾತನಾಡಿದ್ದಾರೆ; ಇನ್ನೂ ಚರ್ಚಿಸಿ ತೀರ್ಮಾನ
ಬಿಜೆಪಿ ಸೇರ್ಪಡೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಪುತ್ರ ಕಾಂತೇಶ್ ಜೊತೆ ಮಾತನಾಡಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಬಿಜೆಪಿ ಸೇರ್ಪಡೆ ಕುರಿತು ತಮ್ಮ ಕುಟುಂಬದೊಂದಿಗೆ ಹಾಗೂ ಹಿತೈಷಿಗಳೊಂದಿಗೆ ಚರ್ಚೆಗಳು ನಡೆಯುತ್ತಿವೆ. ಕಳೆದ ಬಾರಿ ನಡೆದ ರೀತಿಯ ಪರಿಸ್ಥಿತಿ ಮರುಕಳಿಸಬಾರದು ಎಂಬುದು ತಮ್ಮ ಹಾಗೂ ಹಿತೈಷಿಗಳ ನಿಲುವಾಗಿದೆ ಎಂದು ಹೇಳಿದರು.
"ನನಗೆ ಯಾವುದೇ ಫ್ರಸ್ಟ್ರೇಷನ್ ಇಲ್ಲ. ವಿಜಯೇಂದ್ರ ಅವರು ಕಾಂತೇಶ್ ಜೊತೆ ಮಾತನಾಡಿದ್ದಾರೆ. ಹಿಂದೆ ನಡೆದ ತಪ್ಪು ಮತ್ತೆ ಆಗಬಾರದು ಎಂಬ ಉದಾಹರಣೆ ಇದೆ. ನಾನು ಅವರನ್ನು ನಂಬುತ್ತೇನೆ, ಇಲ್ಲ ಎಂದು ಹೇಳುವುದಿಲ್ಲ. ಇನ್ನೂ ಸಮಯವಿದೆ. ಯಾರ್ಯಾರೊಂದಿಗೆ ಮಾತನಾಡಬೇಕು, ಏನು ಮಾಡಬೇಕು ಎಂಬುದನ್ನು ನೋಡೋಣ" ಎಂದು ಈಶ್ವರಪ್ಪ ಹೇಳಿದರು.
ತಾವು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತಮ್ಮ ಹಿತೈಷಿಗಳು ಹಾಗೂ ಬೆಂಬಲಿಗರು ಹೇಳುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದಲೂ ಸಲಹೆಗಳು ಬರುತ್ತಿವೆ. ಇನ್ನಷ್ಟು ಜನರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅವರು ತಿಳಿಸಿದರು.
"ನಮ್ಮ ಜನಾಂಗದವರು ಹಾಗೂ ಹಿತೈಷಿಗಳು ನೀವು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಹಿಂದಿನ ತಪ್ಪು ಮತ್ತೆ ಆಗಬಾರದು ಎಂಬ ನಿಲುವಿನಲ್ಲಿ ಅವರು ಮಾತನಾಡುತ್ತಿದ್ದಾರೆ. ಸಾಕಷ್ಟು ಜನರೊಂದಿಗೆ ಈಗಾಗಲೇ ಚರ್ಚಿಸಿದ್ದೇವೆ. ಇನ್ನೂ ಹಲವು ಸಲಹೆಗಳು ಬರುತ್ತಿವೆ. ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಈಶ್ವರಪ್ಪ ಹೇಳಿದರು.
ಇದೇ ವೇಳೆ, ಬರ ಪರಿಸ್ಥಿತಿಯ ನಡುವೆ ಸರ್ಕಾರ ಹಾಲಿನ ದರ ಹೆಚ್ಚಿಸಲು ಮುಂದಾಗಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, "ಇಷ್ಟನ್ನು ಬರೆಯಿರಿ, ಇನ್ನೊಂದಿಷ್ಟು ನಾಳೆ ಮಾತನಾಡೋಣ" ಎಂದು ಪ್ರತಿಕ್ರಿಯಿಸಿದರು.
ಸ್ಮಿತ್‌ಗೆ ಅಭಿನಂದನೆ ಸಲ್ಲಿಸದ ಕಾಂಗ್ರೆಸ್ ವಿರುದ್ಧ ಟೀಕೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ನಾಯಕರು ಕ್ಯಾಪ್ಟನ್ ಸ್ಮಿತ್ ಅವರನ್ನು ಅಭಿನಂದಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಅಭಿನಂದನೆ ಸಲ್ಲಿಸದಿರುವುದನ್ನು ಈಶ್ವರಪ್ಪ ಟೀಕಿಸಿದರು.
"ದೇಶದ ಗೌರವವನ್ನು ವಿಶ್ವದ ಮುಂದೆ ಎತ್ತಿಹಿಡಿದ ವ್ಯಕ್ತಿಗೆ ಅಭಿನಂದನೆ ಸಲ್ಲಿಸಬೇಕಿತ್ತು. ಅವರು ಆಸ್ಪತ್ರೆಯಲ್ಲಿರುವಾಗ ಬೇಗ ಗುಣಮುಖರಾಗಲಿ ಎಂದು ಒಂದು ಮಾತನ್ನಾದರೂ ಹೇಳಬೇಕಿತ್ತು" ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಮತಬ್ಯಾಂಕ್ ರಾಜಕಾರಣದ ಕಾರಣದಿಂದ ಇಂತಹ ನಿಲುವು ತಾಳುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಎತ್ತಿದ ಈಶ್ವರಪ್ಪ, ಈ ನಡೆ ಖಂಡನೀಯ ಎಂದು ಹೇಳಿದರು.
ಬಡವರ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ
ಬಡವರಿಗಾಗಿ ನಿರ್ಮಾಣವಾಗಬೇಕಿರುವ ಆಶ್ರಯ ಮನೆಗಳ ವಿಚಾರದಲ್ಲೂ ಸರ್ಕಾರದ ವಿರುದ್ಧ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡ ಯೋಜನೆಗಳಲ್ಲಿ ಕಮಿಷನ್ ಸಿಗುತ್ತದೆ ಎಂಬ ಕಾರಣಕ್ಕೆ ಬಡವರ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುತ್ತಿಲ್ಲ ಎಂಬ ಆರೋಪ ಮಾಡಿದರು.
"ಬಡವರ ಮನೆ ನಿರ್ಮಾಣವಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಅಗತ್ಯವಿದ್ದರೆ ಹೋರಾಟವನ್ನು ಯಾವುದೇ ಹಂತಕ್ಕೂ ಕೊಂಡೊಯ್ಯುತ್ತೇವೆ" ಎಂದು ಅವರು ಎಚ್ಚರಿಸಿದರು.
SIR ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
SIR ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಈಶ್ವರಪ್ಪ ಟೀಕಿಸಿದರು. ಚುನಾವಣಾ ಆಯೋಗವು ಯಾರೊಬ್ಬರ ಮತದಾನದ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವಾಗ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿಗಳು ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿ, ಬಳಿಕ ಧರಣಿ ನಡೆಸಿಲ್ಲ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದರು.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು SIR ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ಮತದಾರರ ಹಕ್ಕಿನ ವಿಚಾರದಲ್ಲಿ ಚುನಾವಣಾ ಆಯೋಗದ ಪ್ರಕ್ರಿಯೆಯ ಬಗ್ಗೆ ಜನರಿಗೆ ವಾಸ್ತವಾಂಶ ತಿಳಿಸಬೇಕು ಎಂದು ಹೇಳಿದರು.
Discussions still on joining BJP; Will contest assembly elections for sure: K.S. Eshwarappa
