ಡ್ರಗ್ಸ್‌ ಪಿಡುಗನ್ನು ಸಾಮಾಜಿಕವಾಗಿಯೇ ಎದುರಿಸಬೇಕು: ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್.- The drug menace must be dealt with socially: RSS and Sarkaryawaha Mukund CR

 SUDDILIVE || SHIVAMOGGA

ಡ್ರಗ್ಸ್‌ ಪಿಡುಗನ್ನು ಸಾಮಾಜಿಕವಾಗಿಯೇ ಎದುರಿಸಬೇಕು: ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್.-  The drug menace must be dealt with socially: RSS and Sarkaryawaha Mukund CR  
Rss, drug


ಶಿವಮೊಗ್ಗ:
ಡ್ರಗ್ಸ್‌ ಸೇವನೆ ಇಂದಿನ ಸಮಾಜವನ್ನು ಕಾಡುತ್ತಿರುವ ಗಂಭೀರ ಪಿಡುಗಾಗಿದ್ದು, ಇದನ್ನು ಕೇವಲ ಕಾನೂನು ಮತ್ತು ಪೊಲೀಸ್ ಕ್ರಮಗಳಿಗೆ ಸೀಮಿತಗೊಳಿಸದೆ ಸಾಮಾಜಿಕವಾಗಿಯೇ ಎದುರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್. ಕರೆ ನೀಡಿದರು.

ನಗರದ ಎನ್‌ಇಎಸ್ ಮೈದಾನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಬೌದ್ಧಿಕ ವರ್ಗ ಕಾರ್ಯಕ್ರಮದಲ್ಲಿ ಗಣವೇಷಧಾರಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಕ್ತಿ ನಿರ್ಮಾಣದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯವಾಗಬೇಕು. ಸಮಾಜದಲ್ಲಿ ಆರೋಗ್ಯಕರ ಮೌಲ್ಯಗಳು, ಜವಾಬ್ದಾರಿ ಮತ್ತು ಜಾಗೃತಿ ಬೆಳೆದಾಗ ಮಾತ್ರ ಇಂತಹ ಪಿಡುಗುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ಪುನರುತ್ಥಾನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಪಯಣವನ್ನು ಸ್ಮರಿಸಿದ ಮುಕುಂದ್ ಸಿ.ಆರ್., ಸಂಘದ ಶತಾಬ್ದಿ ವರ್ಷವು ಇದುವರೆಗೆ ನಡೆದ ಕಾರ್ಯಗಳನ್ನು ಹೆಮ್ಮೆಯಿಂದ ಸ್ಮರಿಸುವುದರ ಜೊತೆಗೆ ಮುಂದಿನ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಸಂದರ್ಭವಾಗಿದೆ ಎಂದರು.

ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಪ್ರತಿಪಾದಿಸಿದ ವ್ಯಕ್ತಿ ನಿರ್ಮಾಣದ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ರಾಷ್ಟ್ರ ಪುನರ್ನಿರ್ಮಾಣದ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿಯೂ ವ್ಯಕ್ತಿಯಲ್ಲಿನ ಪ್ರಜ್ಞೆ, ಅರಿವು, ವಿವೇಕ ಮತ್ತು ಮೌಲ್ಯಗಳನ್ನು ಬೆಳೆಸುವ ಕೆಲಸಕ್ಕೆ ಪರ್ಯಾಯವಿಲ್ಲ ಎಂದು ಹೇಳಿದರು.

ಶಾಖೆಗಳ ಮೂಲಕ ಸ್ವಯಂಸೇವಕರಲ್ಲಿ ಶಿಸ್ತು, ಜವಾಬ್ದಾರಿ ಮತ್ತು ಸಮಾಜದ ಬಗ್ಗೆ ಕಳಕಳಿಯನ್ನು ಬೆಳೆಸುವ ಕಾರ್ಯ ನಡೆಯುತ್ತಿದೆ. ಈ ಮೌಲ್ಯಗಳು ವ್ಯಕ್ತಿಯ ಜೀವನ, ಕುಟುಂಬದ ನಡವಳಿಕೆ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ಪ್ರತಿಫಲಿಸಬೇಕು ಎಂದು ತಿಳಿಸಿದರು.

ಸಮಾಜವೇ ಪರಿವರ್ತನೆಯ ಹೊಣೆ ಹೊರಬೇಕು

ಸಂಘವು ಸಮಾಜದಲ್ಲಿ ಪ್ರತ್ಯೇಕ ಸಂಘಟನೆಯಾಗಿ ಉಳಿಯುವುದಕ್ಕಿಂತ ಸಮಾಜದ ಸಂಘಟನೆಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ಸಂಘದ ಮೂಲ ಆಶಯವಾಗಿದೆ ಎಂದು ಮುಕುಂದ್ ಸಿ.ಆರ್. ಹೇಳಿದರು.

ಸಮಾಜದಲ್ಲಿ ದೇಶದ ಬಗ್ಗೆ ಕಾಳಜಿ ಹೊಂದಿರುವ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗೌರವಿಸುವ ಅನೇಕ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿವೆ. ಅಂತಹವರನ್ನು ಗುರುತಿಸಿ, ಅವರೊಂದಿಗೆ ಕೈಜೋಡಿಸಿ, ಪರಸ್ಪರ ಸಹಕಾರದ ಮೂಲಕ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಪರಿವರ್ತನೆಯ ಜವಾಬ್ದಾರಿಯನ್ನು ಸಮಾಜವೇ ತನ್ನದಾಗಿಸಿಕೊಳ್ಳುವಂತೆ ಮಾಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಸಂಘದ ಶತಾಬ್ದಿ ವರ್ಷದ ಅಂಗವಾಗಿ ದೇಶಾದ್ಯಂತ ನಡೆದ ಪಥಸಂಚಲನಗಳು, ಶಾಖಾ ಸಪ್ತಾಹ, ಹಿಂದೂ ಸಮಾವೇಶಗಳು, ಪ್ರಮುಖ ನಾಗರಿಕರ ಸಭೆಗಳು ಮತ್ತು ಸದ್ಭಾವ ಗೋಷ್ಟಿಗಳ ಉದ್ದೇಶವೂ ಸಂಘಟನೆಯ ಶಕ್ತಿಯನ್ನು ವಿಸ್ತರಿಸುವುದರ ಜೊತೆಗೆ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಮತ್ತು ಸಂವಾದವನ್ನು ಹೆಚ್ಚಿಸುವುದಾಗಿದೆ ಎಂದರು.

ಸಾಮಾಜಿಕ ಪರಿವರ್ತನೆಯೇ ವ್ಯವಸ್ಥಾ ಪರಿವರ್ತನೆಗೆ ಆಧಾರ

ಶಿಕ್ಷಣ, ಆರ್ಥಿಕತೆ, ನ್ಯಾಯಾಂಗ, ಆಡಳಿತ ಮತ್ತು ಸುರಕ್ಷತೆ ಸೇರಿದಂತೆ ಸಮಾಜದ ವಿವಿಧ ವ್ಯವಸ್ಥೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿರುವವರು ಪ್ರಾಮಾಣಿಕತೆ, ಸಾಮರ್ಥ್ಯ ಮತ್ತು ದೇಶದ ಬಗ್ಗೆ ಕಳಕಳಿ ಹೊಂದಿರಬೇಕು ಎಂದು ಮುಕುಂದ್ ಸಿ.ಆರ್. ತಿಳಿಸಿದರು.

ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸೂಕ್ತ ವ್ಯಕ್ತಿಗಳು ಜವಾಬ್ದಾರಿಯುತ ಸ್ಥಾನಗಳಿಗೆ ಬರುವುದು ಮುಖ್ಯ. ಆದರೆ ವ್ಯಕ್ತಿಗಳು ಬದಲಾದ ಮಾತ್ರಕ್ಕೆ ವ್ಯವಸ್ಥೆಯಲ್ಲಿ ಶಾಶ್ವತ ಪರಿವರ್ತನೆ ಸಾಧ್ಯವಿಲ್ಲ. ಸಮಾಜದ ಮನಸ್ಥಿತಿ, ಚಿಂತನೆ ಮತ್ತು ನಡವಳಿಕೆಯಲ್ಲಿಯೂ ಬದಲಾವಣೆಯಾಗಬೇಕು ಎಂದು ಹೇಳಿದರು.

ಒಂದು ಶಾಲೆಯಲ್ಲಿ ಸಮರ್ಥ ಮುಖ್ಯಶಿಕ್ಷಕರು ಹಲವು ವರ್ಷಗಳಲ್ಲಿ ಉತ್ತಮ ಬದಲಾವಣೆ ತರಬಹುದು. ಆದರೆ ಅವರು ವರ್ಗಾವಣೆಗೊಂಡ ಬಳಿಕವೂ ಆ ಬದಲಾವಣೆ ಮುಂದುವರಿಯಬೇಕಾದರೆ, ತಮ್ಮೂರಿನ ಶಾಲೆ ಉತ್ತಮವಾಗಿರಬೇಕು ಎಂಬ ಇಚ್ಛಾಶಕ್ತಿ ಸ್ಥಳೀಯ ಜನರಲ್ಲಿಯೂ ಇರಬೇಕು. ಸಮಾಜದಲ್ಲಿ ಇಂತಹ ಸಾಮೂಹಿಕ ಇಚ್ಛಾಶಕ್ತಿಯನ್ನು ಬೆಳೆಸುವುದೇ ಸಾಮಾಜಿಕ ಪರಿವರ್ತನೆ ಎಂದು ವಿವರಿಸಿದರು.

ಪಂಚ ಪರಿವರ್ತನೆಯ ಮೂಲಕ ಸಮಾಜಮುಖಿ ಕಾರ್ಯ

ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯ ಪ್ರಜ್ಞೆ ಸೇರಿದಂತೆ ಪಂಚ ಪರಿವರ್ತನೆಯ ವಿಚಾರಗಳನ್ನು ಸಮಾಜದ ವಿವಿಧ ವರ್ಗಗಳವರೆಗೆ ತಲುಪಿಸುವ ಕಾರ್ಯಕ್ಕೆ ಸಂಘ ಒತ್ತು ನೀಡುತ್ತಿದೆ ಎಂದು ತಿಳಿಸಿದರು.

ಸ್ವದೇಶಿ ಚಿಂತನೆ, ಜಾತಿ-ಮತ ಭೇದಗಳನ್ನು ಮೀರಿ ಸಮಾಜದಲ್ಲಿ ಪರಸ್ಪರ ಗೌರವ ಬೆಳೆಸುವುದು, ಸ್ವಚ್ಛತೆ ಕಾಪಾಡುವುದು, ಕಾನೂನು ಪಾಲಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಜವಾಬ್ದಾರಿಯಿಂದ ವರ್ತಿಸುವುದು ಸಾಮಾಜಿಕ ಪರಿವರ್ತನೆಯ ಭಾಗಗಳಾಗಿವೆ. ವ್ಯಕ್ತಿಯಿಂದ ಆರಂಭವಾಗುವ ಈ ಬದಲಾವಣೆ ಕುಟುಂಬ, ಸಮುದಾಯ, ಗ್ರಾಮ, ನಗರ ಮತ್ತು ದೇಶದಾದ್ಯಂತ ವಿಸ್ತರಿಸಬೇಕು ಎಂದು ಹೇಳಿದರು.

ಸಾಮಾಜಿಕ ಪರಿವರ್ತನೆಗೆ ಚುನಾವಣೆಯಂತಹ ಸ್ಪರ್ಧೆ, ಘೋಷಣೆ ಅಥವಾ ತಕ್ಷಣದ ಫಲಿತಾಂಶದ ನಿರೀಕ್ಷೆ ಅಗತ್ಯವಿಲ್ಲ. ಶಾಂತವಾಗಿ, ನಿರಂತರವಾಗಿ ವ್ಯಕ್ತಿಗಳ ಮನಸ್ಸು ಮತ್ತು ನಡವಳಿಕೆಯಲ್ಲಿ ಬದಲಾವಣೆ ತರುವ ಕಾರ್ಯ ಮುಖ್ಯವಾಗಿದೆ. ಸಂಘವು ಶಾಖೆಗಳ ಮೂಲಕ ನೂರು ವರ್ಷಗಳಿಂದ ಇಂತಹ ಪ್ರಯತ್ನವನ್ನು ಮುಂದುವರಿಸಿಕೊಂಡು ಬಂದಿದೆ ಎಂದು ತಿಳಿಸಿದರು.

ಸಂಸ್ಕೃತಿ ಮತ್ತು ದೇಶದ ಬಗ್ಗೆ ಪ್ರೀತಿ ಬೆಳೆಸಬೇಕು

ದೇಶದ ಸಂಸ್ಕೃತಿ, ಮೌಲ್ಯಗಳು ಮತ್ತು ಪರಂಪರೆಯ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮುಕುಂದ್ ಸಿ.ಆರ್. ಹೇಳಿದರು. ಸಮಾಜದ ಒಳಿತಿಗಾಗಿ ತಮ್ಮ ಸಮಯ, ಪರಿಶ್ರಮ ಮತ್ತು ಪ್ರತಿಭೆಯನ್ನು ವಿನಿಯೋಗಿಸುವ ಮನೋಭಾವ ಬೆಳೆಸಬೇಕು. ಸಂಘದ ಕಾರ್ಯವು ಸಂಘಟನೆಯ ವ್ಯಾಪ್ತಿಗೆ ಮಾತ್ರ ಸೀಮಿತವಾಗದೆ, ದೇಶ ಮತ್ತು ಸಮಾಜದ ಪುನರುತ್ಥಾನಕ್ಕೆ ಪೂರಕವಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿಜಯದಶಮಿ ಉತ್ಸವವು ಸಂಘದ ಸ್ಥಾಪನೆಯ ಮಹತ್ವವನ್ನು ಸ್ಮರಿಸುವುದರ ಜೊತೆಗೆ, ಪ್ರತಿಯೊಬ್ಬ ಸ್ವಯಂಸೇವಕ ತನ್ನ ಜವಾಬ್ದಾರಿಯನ್ನು ಅವಲೋಕಿಸಿಕೊಳ್ಳುವ ಸಂದರ್ಭವೂ ಆಗಿದೆ. ಮುಂದಿನ ದಿನಗಳಲ್ಲಿ ಸಮಾಜದ ವಿವಿಧ ವರ್ಗಗಳನ್ನು ಒಗ್ಗೂಡಿಸಿ, ಸಜ್ಜನ ಶಕ್ತಿಯನ್ನು ಜಾಗೃತಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ವೇಗ ನೀಡಬೇಕಾಗಿದೆ ಎಂದು ಕರೆ ನೀಡಿದರು.

The drug menace must be dealt with socially: RSS and Sarkaryawaha Mukund CR  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close