SUDDILIVE || SHIVAMOGGA
ವೈದ್ಯರು ಬರುವಷ್ಟರಲ್ಲಿ ಪ್ರಾಣಬಿಟ್ಟ ಕಾಟಿ; ಸಕಾಲದಲ್ಲಿ ಚಿಕಿತ್ಸೆ ಸಿಗದಿರುವುದೇ ಸಾವಿಗೆ ಕಾರಣವೇ?Kati died before the doctors arrived; was the cause of death due to not receiving timely treatment?
ವನ್ಯಜೀವಿ ಪ್ರಾಣಿಗಳು ನರಳಿ ನರಳಿ ಪ್ರಾಣ ಬಿಡುವ ಸ್ಥಿತಿ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ. ಈ ಇಲಾಖೆಗಳು ವನ್ಯಜೀವಿರಕ್ಷಣೆಗೆ ಇದೆಯೋ ಅಥವಾ ಇಲ್ಲಾವೋ ಎಂಬ ಗೊಂದಲದಲ್ಲಿ ಸಾರ್ವಜನಿಕರು ಇದ್ದಾರೆ. ಈ ಚಂದಕ್ಕೆ ಅರಣ್ಯ ಇಲಾಖೆ ಬೇಕೆ ಎನ್ನುವಷ್ಟರ ಮಟ್ಟಿಗೆ ಬೇಸರವೆನಿಸಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳೆ ಬಾರದಿದ್ದರೆ ಏನು ಮಾಡುತ್ತಾರೆ. ಶಿಕ್ಷಕರನ್ನ ವರ್ಗ ಮಾಡಿ ಶಾಲೆ ಬಂದ್ ಮಾಡುತ್ತಾರೆ. ಅದರಂತೆ ಇಲ್ಲೂ ಯಾಕೆ ಮಾಡಬಾರದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸಕಾಲಕ್ಕೆ ಅಧಿಕಾರಿಗಳು ಸಿಗದಿದ್ದರೆ ಆಇಲಾಖೆ ಯಾಕೆ ಎಂಬ ಚರ್ಚೆ ಆರಂಭಗೊಂಡಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ಕಾಟಿಯೊಂದಕ್ಕೆ ಸಕಾಲದಲ್ಲಿ ಪಶುವೈದ್ಯಕೀಯ ಚಿಕಿತ್ಸೆ ಹಾಗೂ ಸೂಕ್ತ ರಕ್ಷಣಾ ವ್ಯವಸ್ಥೆ ದೊರೆಯದ ಹಿನ್ನೆಲೆಯಲ್ಲಿ ಅದು ಮೃತಪಟ್ಟಿದೆ ಎನ್ನಲಾಗಿದೆ. ಈ ಘಟನೆ ಸಾಗರ ತಾಲೂಕಿನ ಕಾಸ್ಪಾಡಿ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ವನ್ಯಪ್ರಾಣಿಯ ಜೀವ ಉಳಿಸಲು ತಕ್ಷಣದ ವೈದ್ಯಕೀಯ ನೆರವು ದೊರೆಯದಿರುವ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.
ಸಾಗರ ತಾಲೂಕಿನ ಕಾಸ್ಪಾಡಿ ಸಮೀಪದ ಚೋರಡಿ ವಲಯ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ ಕಾಟಿ ಗಾಯಗೊಂಡಿತ್ತು. ಘಟನೆ ತಿಳಿದ ಬಳಿಕ ಅದಕ್ಕೆ ಚಿಕಿತ್ಸೆ ಕೊಡಿಸಿ ರಕ್ಷಿಸುವ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಆದರೆ, ಸ್ಥಳಕ್ಕೆ ತಕ್ಷಣ ಚಿಕಿತ್ಸೆ ನೀಡಬಲ್ಲ ವೈದ್ಯರು ಲಭ್ಯವಾಗದ ಕಾರಣ ಪರಿಸ್ಥಿತಿ ಗಂಭೀರಗೊಂಡು, ವೈದ್ಯರು ಬರುವಷ್ಟರಲ್ಲಿ ಕಾಟಿ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ಮೃಗಾಲಯ, ಸಕ್ರೆಬೈಲಿನಲ್ಲಿ ವೈದ್ಯರಿಲ್ಲವೇ?
ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಹಾಗೂ ಸಕ್ರೆಬೈಲು ಆನೆ ಶಿಬಿರದಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಲಭ್ಯವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಬೇರೆ ವಲಯದಿಂದ ವೈದ್ಯರನ್ನು ಕರೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಕಾಟಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಚಿತ್ರದುರ್ಗದ ಕಿರು ಮೃಗಾಲಯದ ವೈದ್ಯರಾದ ಡಾ. ಆನಂದ್ ಅವರನ್ನು ಕರೆಸಲಾಗಿತ್ತು ಎನ್ನಲಾಗಿದೆ. ಆದರೆ, ಅವರು ಸ್ಥಳಕ್ಕೆ ತಲುಪುವಲ್ಲಿ ವಿಳಂಬವಾದ ಕಾರಣ ಚಿಕಿತ್ಸೆ ಆರಂಭಿಸುವ ಮುನ್ನವೇ ಕಾಟಿ ಪ್ರಾಣಬಿಟ್ಟಿದೆ ಎಂದು ಮಾಹಿತಿದಾರರು ತಿಳಿಸಿದ್ದಾರೆ.
ಇದೇ ವೇಳೆ, ಶಿವಮೊಗ್ಗ ಮೃಗಾಲಯದಿಂದ ರಕ್ಷಣಾ ಕಾರ್ಯಾಚರಣೆಗೆ ವಾಹನ ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಲಾಗಿತ್ತು ಎನ್ನಲಾಗಿದೆ. ಆದರೆ, ವೈದ್ಯಕೀಯ ನೆರವು ಸಕಾಲದಲ್ಲಿ ದೊರೆಯದಿರುವುದು ರಕ್ಷಣಾ ಕಾರ್ಯಾಚರಣೆಯಲ್ಲಿನ ಪ್ರಮುಖ ಕೊರತೆಯಾಗಿ ಕಂಡುಬಂದಿದೆ.
ದಸರಾ ಉಸ್ತುವಾರಿ ವಹಿಸಿದ್ದ ವೈದ್ಯರೇ ಬರಬೇಕಾಯಿತೇ?
ಡಾ. ಆನಂದ್ ಅವರು ದಸರಾ ಸಂಬಂಧಿತ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಸ್ಥಳೀಯವಾಗಿ ವೈದ್ಯರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅವರನ್ನು ಚಿತ್ರದುರ್ಗದಿಂದ ಕರೆಸುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. ಅವರು ಬರುವಷ್ಟರಲ್ಲಿ ಕಾಟಿ ಮೃತಪಟ್ಟಿರುವುದು ವನ್ಯಜೀವಿ ನಿರ್ವಹಣಾ ವ್ಯವಸ್ಥೆಯ ತುರ್ತು ಸಿದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವನ್ಯಜೀವಿಗಳ ಅಪಘಾತ ಅಥವಾ ಗಾಯದಂತಹ ತುರ್ತು ಸಂದರ್ಭಗಳಲ್ಲಿ ಸ್ಥಳೀಯವಾಗಿ ವೈದ್ಯಕೀಯ ನೆರವು ದೊರೆಯುವ ವ್ಯವಸ್ಥೆ ಇರಬೇಕಾದ ಅಗತ್ಯವನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ವಾಹನ ಹಾಗೂ ರಕ್ಷಣಾ ಪರಿಕರಗಳಿದ್ದರೂ, ಗಾಯಗೊಂಡ ಪ್ರಾಣಿಗೆ ತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಲಭ್ಯವಿಲ್ಲದಿದ್ದರೆ ರಕ್ಷಣಾ ಪ್ರಯತ್ನಗಳು ಪರಿಣಾಮಕಾರಿಯಾಗುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ.
ಶೆಡ್ಯೂಲ್-1 ಪ್ರಾಣಿಯ ಸಾವಿಗೆ ಹೊಣೆ ಯಾರು?
ಕಾಟಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್-1 ಅಡಿಯಲ್ಲಿ ಬರುವ ಪ್ರಾಣಿಯಾಗಿರುವುದರಿಂದ, ಅದರ ರಕ್ಷಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ಅಗತ್ಯವಾಗಿದೆ. ಅಪಘಾತದ ಬಳಿಕ ಎಷ್ಟು ಸಮಯದಲ್ಲಿ ರಕ್ಷಣಾ ತಂಡ ಸ್ಥಳಕ್ಕೆ ತಲುಪಿತು, ವೈದ್ಯರನ್ನು ಸಂಪರ್ಕಿಸಿದ ಸಮಯ ಯಾವುದು, ವೈದ್ಯರು ಸ್ಥಳಕ್ಕೆ ಬರಲು ಏಕೆ ವಿಳಂಬವಾಯಿತು ಮತ್ತು ಸ್ಥಳೀಯವಾಗಿ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಏಕೆ ಇರಲಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕಾಟಿಯ ಸಾವಿಗೆ ನಿಖರವಾದ ಕಾರಣವೇನು, ವೈದ್ಯಕೀಯ ನೆರವು ದೊರೆಯುವಲ್ಲಿ ವಿಳಂಬವಾಗಿದೆಯೇ ಮತ್ತು ಈ ಬಗ್ಗೆ ಇಲಾಖೆಯ ಜವಾಬ್ದಾರಿ ಏನು ಎಂಬುದು ಅಧಿಕೃತ ಸ್ಪಷ್ಟನೆ ಬಂದ ಬಳಿಕವಷ್ಟೇ ತಿಳಿಯಬೇಕಿದೆ.
ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡುವ ಅರಣ್ಯ ಇಲಾಖೆ, ಗಾಯಗೊಂಡ ಪ್ರಾಣಿಗಳಿಗೆ ತಕ್ಷಣ ಚಿಕಿತ್ಸೆ ದೊರೆಯುವಂತೆ ತುರ್ತು ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸಬೇಕೆಂಬ ಒತ್ತಾಯ ಈ ಘಟನೆಯ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.
