ಬನ್ನಿ ಮಂಟಪ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯಲ್ಲ: ಸುರೇಶ್ ಬಾಬು ಆಕ್ಷೇಪ- Banni Mantapa is not a platform for showing political power: Suresh Babu objects

 SUDDILIVE || SHIVAMOGGA

ಬನ್ನಿ ಮಂಟಪ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯಲ್ಲ: ಸುರೇಶ್ ಬಾಬು ಆಕ್ಷೇಪ- Banni Mantapa is not a platform for showing political power: Suresh Babu objects   
Banni, mantap



ಶಿವಮೊಗ್ಗ: ದಸರಾ ಬನ್ನಿ ಮಂಟಪದಲ್ಲಿ ಮಾಜಿ ಮಹಾನಗರಪಾಲಿಕೆ ಸದಸ್ಯರಿಗೆ ವೇದಿಕೆಯಲ್ಲಿ ಅವಕಾಶ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪೀಪಲ್ಸ್ ಫಾರ್ ಸಿವಿಲ್ ರೈಟ್ಸ್ ಸಂಘದ ಅಧ್ಯಕ್ಷ ಸುರೇಶ್ ಬಾಬು, ಬನ್ನಿ ಮಂಟಪವನ್ನು ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ ನಗರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಬನ್ನಿ ಮಂಟಪದ ಕಾರ್ಯಕ್ರಮದಲ್ಲಿ ಉಂಟಾಗುತ್ತಿರುವ ಅವ್ಯವಸ್ಥೆ ಹಾಗೂ ರಾಜಕೀಯ ಪ್ರದರ್ಶನದ ಕುರಿತು ವಿವಿಧ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಅಧಿಕಾರದಲ್ಲಿಲ್ಲದ ಮಹಾನಗರಪಾಲಿಕೆಯ ಮಾಜಿ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆ ಹತ್ತಿಸಲು ಅವಕಾಶ ನೀಡುತ್ತಿರುವುದರ ಔಚಿತ್ಯವೇನು ಎಂದು ಸುರೇಶ್ ಬಾಬು ಪ್ರಶ್ನಿಸಿದರು.

“ನಮ್ಮದು ಚುನಾವಣೆಯ ವಿಚಾರವಲ್ಲ, ದಸರಾ ಕಾರ್ಯಕ್ರಮಕ್ಕೆ ಅಡಚಣೆಯಾಗುತ್ತಿದೆ ಎಂಬುದೇ ನಮ್ಮ ಕಾಳಜಿ. ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಸಾಂಪ್ರದಾಯಿಕ ಕಾರ್ಯಕ್ರಮವನ್ನು ನೋಡಲು ಜನರು ಬರುತ್ತಾರೆ. ಆದರೆ, ಇಂದು ಅಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಿಂತ ರಾಜಕೀಯ ಪ್ರದರ್ಶನವನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬನ್ನಿ ಮಂಟಪದ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ನುರಿತ ಕಲಾತಂಡಗಳು, ವೈಚಾರಿಕ ಮನೋಭಾವ ಹೊಂದಿರುವ ತಂಡಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿವೆ. ಅಂತಹ ಅರ್ಹರಿಗೆ ಅವಕಾಶ ಕಲ್ಪಿಸುವ ಬದಲು ಮಾಜಿ ಮಹಾನಗರಪಾಲಿಕೆ ಸದಸ್ಯರನ್ನು ಆಹ್ವಾನಿಸುತ್ತಿರುವುದೇಕೆ ಎಂಬುದನ್ನು ಮಹಾನಗರಪಾಲಿಕೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿ

ದಸರಾ ಸಂದರ್ಭದಲ್ಲಿ ಬನ್ನಿ ಮಂಟಪಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ವೇದಿಕೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಮುಖಂಡರು ಸೇರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುವುದರ ಜತೆಗೆ ಧಾರ್ಮಿಕ ವಿಧಿವಿಧಾನಗಳಿಗೂ ಅಡಚಣೆಯಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಆಕ್ಷೇಪಿಸಿದರು.

ರಾಜ ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಕತ್ತಿ ಪೂಜೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳು ಯಾವುದೇ ಅಡಚಣೆಯಿಲ್ಲದೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಹಿಂದಿನ ವರ್ಷಗಳಲ್ಲಿ ಕತ್ತಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರು ತಡೆದಿರುವ ಘಟನೆಗಳೂ ನಡೆದಿವೆ ಎಂದು ಅವರು ಗಮನ ಸೆಳೆದರು.

ಶಿಷ್ಟಾಚಾರ ಪಾಲನೆಗೆ ಆಗ್ರಹ

ಬನ್ನಿ ಮಂಟಪದಲ್ಲಿ ಸಂಸದರು, ಶಾಸಕರು, ಸಚಿವರು ಹಾಗೂ ಸರ್ಕಾರದ ಭಾಗವಾಗಿರುವ ಸೂಡಾ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಶಿಷ್ಟಾಚಾರದಂತೆ ಅವಕಾಶ ಕಲ್ಪಿಸಬೇಕು. ಅರ್ಚಕರು, ಪುರೋಹಿತರು ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಸಂಬಂಧಿಸಿದವರಿಗೆ ಆದ್ಯತೆ ನೀಡಬೇಕು. ಚುನಾಯಿತ ಪ್ರತಿನಿಧಿಗಳಲ್ಲದ ಮಾಜಿ ಸದಸ್ಯರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸುವುದನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಸಲ್ಲಿಸುತ್ತಿದ್ದರೂ ಮಹಾನಗರಪಾಲಿಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಮುಖಂಡರು, ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮಹಾನಗರಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಎಚ್ಚರಿಸಿದರು.

ಪೀಪಲ್ಸ್ ಫಾರ್ ಸಿವಿಲ್ ರೈಟ್ಸ್ ಸಂಘದ ಸದಸ್ಯರಾದ ನಿರಂಜನ ಮೂರ್ತಿ, ಯಶವಂತ್, ಗುರುಕಿರಣ್ ಸುಬ್ರಮಣ್ಯ, ಭರತ್, ಅಭಿಲಾಷ್ ಹಾಗೂ ಅಭಿಜಿತ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Banni Mantapa is not a platform for showing political power: Suresh Babu objects   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close